ಶ್ರೀಮದ್ಭಗವದ್ಗೀತೆ (ಅನುವಾದಸಹಿತ ಶ್ಲೋಕಗಳು)
ಚಿತ್ರ ಕೃಪೆ - Google Images
ಹಿಂದೂಗಳ ಪವಿತ್ರ ಗ್ರಂಥವೆಂದೇ ಹೆಸರಾಗಿರುವ ಭಗವದ್ಗೀತೆಯು ಕುರುಕ್ಷೇತ್ರವೆಂಬ ಪಾಂಡವರಿಗೂ ಹಾಗೂ ಕೌರವರಿಗೂ ನಡುವೆ ನೆಡೆದ ಮಹಾಸಂಗ್ರಾಮದ ಆದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀ ಕೃಷ್ಣಪರಮಾತ್ಮನು ಅರ್ಜುನನಿಗೆ ನೀಡಿದ ಉಪದೇಶ ಅಥವಾ ಮಾರ್ಗದರ್ಶನವಾಗಿದೆ.
ಸಂಗ್ರಾಮದ ಕಣದಲ್ಲಿ ಯುದ್ಧಸನ್ನದ್ಧರಾಗಿರುವ ಪಾಂಡವರು ಹಾಗೂ ಕೌರವರ ಪಡೆಗಳನ್ನು ಅವಲೋಕಿಸಿದ ಅರ್ಜುನನು ಎರೆಡೂ ಪಡೆಗಳಲ್ಲಿಯೂ ತನ್ನ ಅಣ್ಣ-ತಮ್ಮಂದಿರು, ಬಂಧುಗಳು ದಾಯಾದಿಗಳಿರುವುದನ್ನು ಕಂಡು ಅವರೊಂದಿಗೇನಾ ನಾನು ಯುದ್ಧ ಮಾಡಬೇಕಿರುವುದು?, ಇವರೊಂದಿಗೆ ಯುದ್ಧ ಮಾಡಿ ತನ್ನವರನ್ನೇ ತಾನು ಸಂಹರಿಸುವುದು ತಪ್ಪಲ್ಲವೇ? ಎಂಬ ಜಿಜ್ಞಾಸೆಗೊಳಗಾಗಿ ತನ್ನಲ್ಲಿನ ಪರಾಕ್ರಮ ಶಕ್ತಿಗಳು ಕುಂದಿ, ಚಿಂತೆಗೊಳಗಾಗಿ, ಯುದ್ಧದಲ್ಲಿ ಜಯಿಸಬೇಕೆಂಬ ತನ್ನ ಧೃಢಸಂಕಲ್ಪವನ್ನೂ ಸಹ ಕಳೆದುಕೊಳ್ಳುತ್ತಾನೆ ಮತ್ತು ತನ್ನ ಚಿಂತೆಯನ್ನು ತೋಡಿಕೊಳ್ಳುವ ಸಲುವಾಗಿ ಶೀ ಕೃಷ್ಣನ ಮೊರೆ ಹೋಗುತ್ತಾನೆ.. ಇಂತಹ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನನ ಸಂದೇಹವನ್ನು ದೂರ ಮಾಡುವ ನಿಟ್ಟಿನಲ್ಲಿ, ಭಗವದ್ಗೀತೆಯನ್ನು ಉಪದೇಶಿಸಿ, ತನ್ನ ವಿಶ್ವರೂಪ ದರ್ಶನವನ್ನು ನೀಡಿದನು.
ಭಗವದ್ಗೀತೆ ಗ್ರಂಥವನ್ನು ಯಾರು ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಓದಿ ಅರ್ಥ ಮಾಡಿಕೊಳ್ಳಲು ಸಮರ್ಥರಿರುತ್ತಾರೆಯೋ ಅಂತಹ ವ್ಯಕ್ತಿಗಳು ತಮ್ಮ ಲೌಕಿಕ ಜೀವನದಲ್ಲಿ ಎದುರಾಗಬಹುದಾದ ಎಲ್ಲಾ ನೋವು, ಚಿಂತೆ, ಕಷ್ಟ, ಕಾರ್ಪಣ್ಯಗಳಿಂದಲೂ ಸುಲಭವಾಗಿ ಹೊರಬರಬಹುದಾಗಿದೆ.
ಇಂತಹ ಮಹಾಗ್ರಂಥವು ಒಟ್ಟು 18 ಅಧ್ಯಾಯಗಳನ್ನು ಒಳಗೊಂಡಿದೆ ಅವುಗಳೆಂದರೆ,,,
- ಅರ್ಜುನ ವಿಷಾದ ಯೋಗ
ಸಮರಾಂಗಣದಲ್ಲಿ ತನ್ನ ಬಂಧುಗಳನ್ನೇ ಯುದ್ಧದಲ್ಲಿ ಎದುರಿಸಬೇಕಾಗುವ, ಯುದ್ಧ ಮಾಡಬೇಕಾಗುವ ಸಂದರ್ಭವನ್ನು ನೆನೆಸಿಕೊಂಡು ಚಿಂತೆಗೀಡಾಗಿ, ತನ್ನ ನೋವನ್ನಶ್ರೀ ಕೃಷ್ಣನ ಬಳಿ ತೋಡಿಕೊಳ್ಳುವ ಸನ್ನಿವೇಶವನ್ನು ಅರ್ಜುನ ವಿಷಾದ ಯೋಗದಲ್ಲಿ ಕಾಣಬಹುದಾಗಿದೆ.
- ಸಾಂಖ್ಯ ಯೋಗ
ಅರ್ಜುನನಲ್ಲಿ ಉಂಟಾಗಿರುವ ಚಿಂತೆಯ ಕಾರಣವನ್ನರಿತ ಶ್ರೀ ಕೃಷ್ಣ ಪರಮಾತ್ಮನು ಅವನ ಚಿಂತೆಯನ್ನು ದೂರ ಮಾಡಲು, ಅವನಲ್ಲಿ ತಿಳುವಳಿಕೆಯನ್ನು ಮೂಡಿಸುವ ಸಲುವಾಗಿ, ಮನುಷ್ಯನ ದೇಹ ಮತ್ತು ಆತ್ಮ ಇವೆರೆಡರ ನಡುವೆ ಇರುವ ಸಂಬಂಧವೆಂತಹುದು, ಆತ್ಮಕ್ಕೆ ಸಾವಿಲ್ಲದಿರುವ ಹಾಗೂ ಮನುಷ್ಯನ ಮರಣಾನಂತರ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಸಾಗುವ ಪ್ರಕ್ರಿಯೆಯನ್ನು, ಬದುಕಿರುವ ಸಂದರ್ಭದಲ್ಲಿಯೇ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡಲ್ಲಿ ಅಂತಹ ಮನುಷ್ಯನಲ್ಲಿ ಕಾಣಬಹುದಾದ ಲಕ್ಷಣಗಳು ಈ ಎಲ್ಲ ವಿಷಯಗಳ ಕುರಿತು ವಿವರಿಸುವ ಸನ್ನಿವೇಶವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯವಾದ ಸಾಂಖ್ಯ ಯೋಗದಲ್ಲಿ ಕಾಣಬಹುದಾಗಿದೆ.
- ಕರ್ಮ ಯೋಗ
ಕರ್ಮ ಯೋಗದಲ್ಲಿ ಪ್ರಮುಖವಾಗಿ ಶ್ರೀ ಕೃಷ್ಣನು ಮಾನವನು ನೆರವೇರಿಸಬೇಕಾದ ಕರ್ಮ (ಕ್ರಿಯೆ) ಹಾಗೂ ಸ್ವಾರ್ಥ ಈ ಎರೆಡರ ನಡುವಿನ ಸಂಬಂಧವನ್ನು ವಿವರವಾಗಿ ತಿಳಿಯಪಡಿಸುತ್ತಾನೆ ಹುಟ್ಟಿದ ಪ್ರತಿಯೊಬ್ಬ ಮಾನವನು ಕರ್ಮದ ನಿಯಮಕ್ಕೆ ಒಳಗಾಗಲೇಬೇಕು. ಅಂದರೆ ಜನಿಸಿದ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕರ್ಮ(ಕ್ರಿಯೆ)ವನ್ನು ನಿರ್ವಹಿಸಲೇಬೇಕು. ಆದರೆ ಕರ್ಮವನ್ನು ನಿರ್ವಹಿಸುವಾಗ ಮನಸ್ಸಿನಲ್ಲಿ ಸ್ವಾರ್ಥವನ್ನು ಒಳಗೊಂಡು ಹಾಗೂ ನಿಸ್ವಾರ್ಥತೆಯಿಂದ ಜಾರಿಗೊಳಿಸಿದಲ್ಲಿ ಉಂಟಾಗಬಹುದಾದ ವ್ಯತ್ಯಾಸಗಳ ಕುರಿತು, ಕರ್ಮದ ನಿಯಮದಿಂದ ಉಂಟಾಗಬಹುದಾದ ನೋವು, ಸಂಕಟಗಳಿಂದ ಹೊರಬರಬರುವ ರಹಸ್ಯವನ್ನು ಉಪದೇಶಿಸಿರುವ ಸನ್ನಿವೇಶವನ್ನು ಕರ್ಮಯೋಗದಲ್ಲಿ ಕಾಣಬಹುದಾಗಿದೆ.
- ಜ್ಞಾನ ಯೋಗ
ಜ್ಞಾನ ಯೋಗವು ಮನುಷ್ಯನಲ್ಲಿನ ಆತ್ಮ ಹಾಗೂ ದೇವರ ನಡುವಿನ ಸಂಬಂಧವನ್ನು, ಗುರುವಿನ ಮಾರ್ಗದರ್ಶನದ ಅವಶ್ಯಕತೆಯನ್ನು, ಆದ್ಯಾತ್ಮಜ್ಞಾನದ ಕುರಿತು ಹಾಗೂ ಫಲಾಫಲಗಳಿಂದ ಹೊರಬರುವಲ್ಲಿ ಆದ್ಯಾತ್ಮಜ್ಞಾನದ ಮಹತ್ವವನ್ನು ತಿಳಿಸಿಕೊಡುವ ಸನ್ನಿವೇಶವನ್ನು ಕಾಣಬಹುದಾಗಿದೆ.
- ಕರ್ಮ ಸನ್ಯಾಸ ಯೋಗ
ಕರ್ಮ ಸನ್ಯಾಸ ಹಾಗೆಂದರೇನು? ಸನ್ಯಾಸ ಎಂದರೆ ಲೌಕಿಕ ಜಗತ್ತಿನಲ್ಲಿನ ಸಂಸಾರ ಬಂಧನವನ್ನು ತ್ಯಜಿಸಿ ಮೋಕ್ಷವನ್ನರಸಿ ಜೀವಿಸುವ ಪದ್ದತಿಯೇ ಸನ್ಯಾಸ ಎನ್ನಬಹುದು. ಹಾಗಿದ್ದಲ್ಲಿ ಕರ್ಮ ಸನ್ಯಾಸ ಎಂದರೇನು? ಹೆಸರೇ ಸೂಚಿಸುವಂತೆ ಕರ್ಮನಿಯಮಕ್ಕೆ ಹುಟ್ಟಿದ ಪ್ರತಿಯೊಬ್ಬರೂ ಒಳಗಾಗಲೇಬೇಕು. ಇದು ವಿಧಿ ನಿಯಮ. ಆದರೆ ಜೀವನದಲ್ಲಿ ಕೈಗೊಳ್ಳುವ ಕರ್ಮಗಳಿಂದ ಉಂಟಾಗುವ ಫಲಾಫಲಗಳ ಕುರಿತು ಚಿಂತಿಸದೇ ಆದ್ಯಾತ್ಮಜ್ಞಾನದ ಬಲದಿಂದ ಶಾಂತಿ, ಸಹನೆ ಹಾಗೂ ನಿರ್ಲಿಪ್ತತೆಯಿಂದ ತನ್ನ ಪಾಲಿನ ಕರ್ಮಗಳನ್ನು ನಿರ್ವಹಿಸುವುದೇ ಕರ್ಮ ಸನ್ಯಾಸ ಎಂದು ಹೇಳಬಹುದು. ಶ್ರೀ ಕೃಷ್ಣನು ಕರ್ಮ ಸನ್ಯಾಸ ಯೋಗದಲ್ಲಿ ಕರ್ಮ ಸನ್ಯಾಸ ಎಂದರೇನು? ಕರ್ಮ ಸನ್ಯಾಸವನ್ನು ಅನುಸರಿಸುವ ಮೂಲಕ ಅಪರಿಮಿತ ಆನಂದವನ್ನು ಹೊಂದುವ ಬಗೆಯನ್ನು ಕುರಿತು ತಿಳಿಸಿರುವ ಸನ್ನಿವೇಶವನ್ನು ಈ ಅಧ್ಯಾಯದಲ್ಲಿ ಕಾಣಬಹುದಾಗಿದೆ.
- ಧ್ಯಾನ ಯೋಗ
ಜೀವಿಸುತ್ತಿರುವ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಆದರೆ ಅವನನ್ನು ಕಾಣುವ ಶಕ್ತಿಯನ್ನು ನಾವು ಗಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಧ್ಯಾನದ ಮಹತ್ವ, ಧ್ಯಾನವನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ಮನಸ್ಸು ಮತ್ತಿತರೆ ಇಂದ್ರಿಯಗಳನ್ನು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ) ನಮ್ಮ ಹತೋಟಿಯಲ್ಲಿರಿಸಿಕೊಳ್ಳುವ ಬಗೆ ಹಾಗೂ ನಮ್ಮ ಮನಸ್ಸನ್ನು ಸದಾ ಕಾಲ ಪರಮಾತ್ಮನಲ್ಲಿಯೇ ಕೇಂದ್ರೀಕರಿಸುವ ಕುರಿತು ಶ್ರೀ ಕೃಷ್ಣನು ಧ್ಯಾನ ಯೋಗದಲ್ಲಿ ತಿಳಿಸಿಕೊಟ್ಟಿದ್ದಾನೆ.
- ಜ್ಞಾನ ವಿಜ್ಞಾನ ಯೋಗ
ಪ್ರತಿಯೊಂದು ಜೀವಿಯಲ್ಲಿಯೂ ಪರಮಾತ್ಮ ನೆಲೆಸಿದ್ದಾನೆ. ಹಾಗೂ ದೇವರು ಒಬ್ಬನೇ. ಲೌಕಿಕ ಪ್ರಪಂಚದ ಹಾಗೂ ಅಧ್ಯಾತ್ಮಿಕ ಪ್ರಪಂಚದ ಸಕಲ ಆಗು-ಹೋಗುಗಳಿಗೂ ಪರಮಾತ್ಮನೇ ಮೂಲ ಕಾರಣಕರ್ತ ಹಾಗೂ ಸಕಲ ಚರಾಚರ ಜಗತ್ತಿಗೂ ಆಧಾರ ಸ್ಥಂಭ. ಭಕ್ತರು ದೇವರನ್ನು ಕಾಣುವಲ್ಲಿ ಅನುಸರಿಸುವ ಮಾರ್ಗಗಳು, ಅದರ ಫಲಾಫಲಗಳನ್ನು ಕುರಿತು ಶ್ರೀ ಕೃಷ್ಣನು ಜ್ಞಾನ ವಿಜ್ಞಾನ ಯೋಗದಲ್ಲಿ ತಿಳಿಸಿಕೊಟ್ಟಿರುವ ಸನ್ನಿವೇಶವನ್ನು ಕಾಣಬಹುದಾಗಿದೆ
- ಅಪರಪರಬ್ರಹ್ಮ ಯೋಗ
ಈ ಅಧ್ಯಾಯದಲ್ಲಿ ಅರ್ಜುನನು ಕೇಳಿದ ಬ್ರಹ್ಮ ಎಂದರೇನು? , ಕರ್ಮ ಎಂದರೆ ಯಾವುದು? ಪರಮಾತ್ಮನನ್ನು ಹೊಂದುವ ಬಗೆ ಹೇಗೆ? ಮೊದಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶ್ರೀಕೃಷ್ಣ ಪರಮಾತ್ಮನು ಜೀವನದ ಪರಮಸತ್ಯವನ್ನು ತಿಳಿಸಿಕೊಡುವ ಸನ್ನಿವೇಶವನ್ನು ಕಾಣಬಹುದು.
- ರಾಜವಿದ್ಯಾ-ರಾಜಗುಹ್ಯ ಯೋಗ
ಮಾನವನು ತನ್ನ ಜೀವಿತಾವಧಿಯಲ್ಲಿ ಪರಮಾತ್ಮನಲ್ಲಿ ಪರಿಶುದ್ಧವಾದ ಭಕ್ತಿಯನ್ನಿರಿಸಿಕೊಳ್ಳುವುದಲ್ಲದೇ, ತನ್ನ ಪಾಲಿನ ಕರ್ಮಗಳನ್ನು ಶ್ರದ್ಧೆಯಿಂದ ನೆರವೇರಿಸಿದಲ್ಲಿ ಅವನ ಆತ್ಮವು ಪರಮಾತ್ಮನೊಂದಿಗೆ ಅಭೂತಪೂರ್ವವಾದ ಸಂಬಂಧವನ್ನು ಹೊಂದುವುದಲ್ಲದೇ, ಮರಣಾನಂತರ ಪರಮಾತ್ಮನ ಸನ್ನಿಧಿಯನ್ನು ಸೇರುತ್ತಾನೆ ಎಂಬ ಸತ್ಯದ ಅನಾವರಣವನ್ನು ಈ ಅಧ್ಯಾಯವು ಮಾಡಿಕೊಡುತ್ತದೆ.
- ವಿಭೂತಿ ಯೋಗ
ಜಗತ್ತಿನ ಎಲ್ಲ ಆಗು-ಹೋಗುಗಳಿಗೂ ಪರಮಾತ್ಮನಾದ ಶ್ರೀಕೃಷ್ಣನೇ ಮುಖ್ಯ ಕಾರಣಕರ್ತ, ಆಧ್ಯಾತ್ಮಿಕ ಅಥವಾ ಲೌಕಿಕ ಅಥವಾ ಇಹಲೋಕದಲ್ಲಿನ ಯಾವುದೇ ಸೌಂದರ್ಯ, ನೋವು-ನಲಿವು ಮೊದಲಾದ ಎಲ್ಲಾ ಘಟನೆಗಳಿಗೂ ಪರಮಾತ್ಮನ ದೈವೀ ಶಕ್ತಿಯೇ ಮೂಲ ಕಾರಣವಾಗಿದೆ. ಅವನಿಲ್ಲದೇ ಏನೂ ಇಲ್ಲ ಎಂಬುದನ್ನು ಸಾರುವ ಸನ್ನಿವೇಶವನ್ನು ವಿಭೂತಿ ಯೋಗ ಅಧ್ಯಾಯವು ಒಳಗೊಂಡಿದೆ.
- ವಿಶ್ವರೂಪ ದರ್ಶನ ಯೋಗ
ಎಲ್ಲರೂ ನೋಡಲು ಅಸಾಧ್ಯವಾದ, ಪರಮ ಪವಿತ್ರವಾದ ವೈಭವೋಪೇತವಾದ, ಅಸಾಧಾರಣ ರೂಪದಿಂದ ಕಂಗೊಳಿಸುತ್ತಿರುವ, ಪರಿಶುದ್ಧವಾದ ಭಕ್ತಿಯಿಂದ ಮಾತ್ರವೇ ಕಾಣಬಹುದಾದ ತನ್ನ ವಿಶ್ವರೂಪವನ್ನು ಅರ್ಜುನನಿಗೆ ದರ್ಶನ ಮಾಡಿಸುವ ಸನ್ನಿವೇಶವನ್ನು ಈ ಅಧ್ಯಾಯದಲ್ಲಿ ಕಾಣಬಹುದಾಗಿದೆ.
- ಭಕ್ತಿ ಯೋಗ
ಆಧ್ಯಾತ್ಮಿಕತೆ ಎಂಬುದರ ಮೂಲವೇ ಪರಮಾತ್ಮನಲ್ಲಿರುವ ಪರಿಶುದ್ಧವಾದ ಭಕ್ತಿ. ಇಂತಹ ಪರಿಶುದ್ಧವಾದ ಭಕ್ತಿಯನ್ನು ಬೆಳೆಸಿಕೊಂಡವನು ದೈವಕ್ಕೆ ಸಮಾನವಾದವನಾಗುತ್ತಾನೆ. ಇಂತಹ ಪರಿಶುದ್ಧ ಭಕ್ತಿಯಿಂದಲ್ಲದೇ ಜಗತ್ ರಕ್ಷಕನಾದ ಪರಮಾತ್ಮನನ್ನು ಕಾಣುವ, ಹೊಂದುವ ಮತ್ತೊಂದು ಉತ್ತಮವಾದ ಮಾರ್ಗವಿಲ್ಲ ಎಂಬುದನ್ನು ಭಕ್ತಿಯೋಗದ ಮೂಲಕ ಶ್ರೀ ಕೃಷ್ಣನು ಅರ್ಜುನನಿಗೆ ಮನವರಿಕೆ ಮಾಡಿಕೊಡುವ ಸನ್ನಿವೇಶವನ್ನು ಈ ಅಧ್ಯಾಯದಲ್ಲಿ ಕಾಣಬಹುದು.
- ಕ್ಷೇತ್ರ-ಕ್ಷೇತ್ರಜ್ಞ ವಿಭಾಗ ಯೋಗ
ಲೌಕಿಕ ಜಗತ್ತಿನ ಕರ್ಮ ನಿಯಮದಿಂದ ಮುಕ್ತಿ ಪಡೆದು ಪರಮಾತ್ಮನನ್ನು ಹೊಂದಬೇಕಿದ್ದಲ್ಲಿ ಮೊದಲು ಮಾನವ, ಅವನ ದೇಹ ಮತ್ತು ಆತ್ಮ, ಕರ್ಮ ಮತ್ತು ಅದರ ಫಲಾಫಲಗಳು, ಇವೆಲ್ಲದರ ಮೂಲ ಕಾರಣಕರ್ತನಾದ ಸಕಲಕ್ಕೂ ಕಾರಣನಾದ,ಸಕಲ ಚರಾಚರ ವಸ್ತು-ಜೀವಿಗಳ ಅಳಿವು-ಉಳಿವಿಗೆ ಮೂಲನಾದ ಪರಮಾತ್ಮ ಎಂದರೇನೆಂದು ತಿಳುಕೊಳ್ಳುವುದು ಅತ್ಯವಶ್ಯಕ ಎಂಬ ಸತ್ಯವನ್ನು ತಿಳಿಸಿಕೊಡುವ ಸನ್ನಿವೇಶವನ್ನು ಕ್ಷೇತ್ರ-ಕ್ಷೇತ್ರಜ್ಞ ವಿಭಾಗ ಯೋಗವು ತಿಳಿಸಿಕೊಡುತ್ತದೆ.
- ಗುಣತ್ರಯ ವಿಭಾಗ ಯೋಗ
ನರರೂಪಿ ದೇಹವೆಂಬ ರೂಪವನ್ನು ಧರಿಸಿ ಐಹಿಕ ಜಗತ್ತಿಗೆ ಕಾಲಿರಿಸಿರುವ ಪ್ರತಿಯೊಂದು ಜೀವಿಯಲ್ಲಿನ ಆತ್ಮಗಳೂ ಸಹ ಪ್ರಮುಖವಾದ ಮೂರುು ಗುಣಗಳ (ಸಾತ್ವಿಕ ಗುಣ, ರಜೋ ಗುಣ ಹಾಗೂ ತಮೋ ಗುಣ) ನಿಯಂತ್ರಣದಲ್ಲಿರುತ್ತವೆ. ಎಲ್ಲಾ ಸಂದರ್ಭಗಳಲ್ಲಿಯೂ ತನ್ನ ದೇಹವನ್ನು ಮನಸ್ಸನ್ನೂ ಹಿಡಿತದಲ್ಲಿರಿಸಿಕೊಂಡು ಪರರ ಹಿತವನ್ನೇ ಚಿಂತಿಸುತ್ತಾ ನಿಸ್ವಾರ್ಥಿಯಾಗಿ ಪರಿಶುದ್ಧವಾದ ಉತ್ತಮವಾದ ಕಾರ್ಯಗಳನ್ನೇ ಕೈಗೊಳ್ಳುವ ಗುಣವೇ ಸಾತ್ವಿಕ ಗುಣ. ಇತರರಿಗೆ ಸದಾ ಕಾಲ ಕೇಡನ್ನೇ ಬಯಸುತ್ತಾ, ತನ್ನ ಸ್ವಾರ್ಥ ಸಾಧನೆಯನ್ನೇ ಮೂಲ ಗುರಿಯಾಗಿರಿಸಿಕೊಂಡು ಬದುಕುವ ಗುಣವೇ ತಮೋ ಗುಣ. ಇನ್ನು ಈ ಎರೆಡು ಗುಣಗಳ ಮಿಶ್ರಣವೇ ರಜೋ ಗುಣ. ಈ ಪ್ರಮುಖವಾದ ಮೂರು ಗುಣಗಳನ್ನು ಅರ್ಥೈಸಿಕೊಂಡು ಅವುಗಳ ನಿಯಂತ್ರಣಕ್ಕೊಳಪಡದೇ ಅವುಗಳ ಹಿಡಿತವನ್ನು ಬಿಡಿಸಿಕೊಳ್ಳುವುದು ಹೇಗೆಂಬ ವಿಷಯವನ್ನು ಶ್ರೀ ಕೃಷ್ಣನು ಈ ಅಧ್ಯಾಯದಲ್ಲಿ ತಿಳಿಸಿಕೊಡುವ ಸನ್ನಿವೇಷವನ್ನು ಕಾಣಬಹುದಾಗಿದೆ.
- ಪುರುಷೋತ್ತಮ ಪ್ರಾಪ್ತಿ ಯೋಗ
ಮನುಷ್ಯನು ತನ್ನೆಲ್ಲ ಬಂಧನಗಳಿಂದ ಬಿಡಿಸಿಕೊಂಡು, ಪರಮಾತ್ಮನೇ ಅಂತಿಮ ಎನ್ನುವುದನ್ನು ತಿಳಿಯುವುದು ಹಾಗೂ ಪರಮಾತ್ಮನನ್ನು ಸೇರುವುದೇ ಲೌಕಿಕ ಜಗತ್ತಿನಲ್ಲಿ ಆಧ್ಯಾತ್ಮದ ಸಾಧನೆಯ ಅಂತಿಮ ಗುರಿಯಾಗಿದೆ. ಈ ವಿಷಯದ ಕುರಿತಾದ ಸನ್ನಿವೇಷವನ್ನು ಪುರುಷೋತ್ತಮ ಪ್ರಾಪ್ತಿ ಯೋಗದಲ್ಲಿ ಕಾಣಬಹುದು.
- ದೈವಾಸುರ ಸಂಪದ್ವಿಭಾಗ ಯೋಗ
ಮನುಷ್ಯನು ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದೇ ಲೌಕಿಕ ಬಂಧನದಿಂದ ಮುಕ್ತರಾಗಿ ಪರಮಾತ್ಮನನ್ನು ಸೇರುವುದಕ್ಕಾಗಿ. ಆದರೆ ಜೀವನ ಪೂರ್ತಿ ಅಸುರೀ ಸ್ವಭಾವವನ್ನು ಮೈಗೂಡಿಸಿಕೊಂಡು ಯಾವುದೇ ಧಾರ್ಮಿಕ ನಿಯಮಗಳಿಗೆ ಬದ್ಧರಾಗಿಲ್ಲದೇ, ಇತರರ ನೋವು, ಸಂಕಟದಲ್ಲಿ ತಮ್ಮ ಸಂತೋಷವನ್ನು ಅರಸುವವರಿಗೆ ಜನ್ಮಗಳಿಂದ ಮುಕ್ತಿ ಲಭಿಸುವುದಿಲ್ಲ ಅಲ್ಲದೇ ಮತ್ತಷ್ಟು ಕೆಟ್ಟ ಜನ್ಮಗಳನ್ನು ಹೊಂದುತ್ತಾರಲ್ಲದೇ ಮತ್ತಷ್ಟು ಲೌಕಿಕ ಬಂಧನಗಳಿಗೆ ಒಳಗಾಗುತ್ತಾರೆ. ಆದರೆ ಸದಾ ಧರ್ಮ ನಿಯಮಗಳನ್ನು ಪಾಲಿಸುತ್ತಾ, ಪರಿಶುದ್ಧವಾದ ದೈವಭಕ್ತಿಯಿಂದ, ಸನ್ನಡತೆಯುಳ್ಳವನಾಗಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗುವವನಿಗೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೇ, ಲೌಕಿಕ ಬಂಧನಗಳಿಂದ ಮುಕ್ತಿ ಪಡೆಯುತ್ತಾನೆ. ಎಂಬುದನ್ನು ಈ ಅಧ್ಯಾಯವು ನಮಗೆ ತಿಳಿಸಿಕೊಡುತ್ತದೆ.
- ಶ್ರದ್ಧಾತ್ರಯ ವಿಭಾಗ ಯೋಗ
ಈಗಾಗಲೇ ತಿಳಿಸಿದಂತೆ ಗುಣಗಳಲ್ಲಿ ಮುಖ್ಯವಾದ 3 ಗುಣಗಳನ್ನು ಕಾಣಬಹುದು(ರಜೋ ಗುಣ, ತಮೋ ಗುಣ ಹಾಗೂ ಸಾತ್ವಿಕ ಗುಣ). ಅದೇ ರೀತಿಯಲ್ಲಿಯೇ ಶ್ರದ್ಧೆಯಲ್ಲಿಯೂ ಈ ಮೂರು ಅಂಶಗಳನ್ನು ಕಾಣಬಹುದಾಗಿದೆ. ಯಾವ ವ್ಯಕ್ತಿಯು ಸಾತ್ವಿಕ ಗುಣವನ್ನು ಹೊರತುಪಡಿಸಿ, ಉಳಿದೆರೆಡು ಶ್ರದ್ಧೆಗಳನ್ನು ಅನುಸರಿಸಿ, ಅದಕ್ಕನುಗುಣವಾದ ಕ್ರಿಯೆಗಳಲ್ಲಿ ತೊಡಗಿ ಬದುಕುತ್ತಾನೆಯೋ ಅಂತಹವನು, ಲೌಕಿಕ ಬಂಧನಗಳಿಂದ ಮುಕ್ತನಾಗಲು ಸಾಧ್ಯವಿಲ್ಲ ಬದಲಾಗಿ ಯಾರು ಸಾತ್ವಿಕ ವಿಷಯಗಳಲ್ಲಿ ಶ್ರದ್ಧೆಯನ್ನಿರಿಸಿ ಜೀವನ ಸಾಗಿಸುವನೋ ಅವನು ಹೃದಯ ಶ್ರೀಮಂತಿಕೆಯನ್ನು ಗಳಿಸುವುದಲ್ಲದೇ, ಪರಮಾತ್ಮನನ್ನು ಕಾಣಲು ನೆರವಾಗುತ್ತದೆ ಮತ್ತು ಲೌಕಿಕ ಬಂಧನಗಳಿಂದ ಮುಕ್ತನಾಗಲು ಸಹಕಾರಿಯಾಗುತ್ತದೆ ಎಂದು ಹೇಳಿರುವ ಸನ್ನಿವೇಷವನ್ನು ಈ ವಿಭಾಗದಲ್ಲಿ ಕಾಣಬಹುದು.
- ಮೋಕ್ಷ ಸನ್ಯಾಸ ಯೋಗ
ಲೌಕಿಕ ಬಂಧನಗಳಿಂದ ಮುಕ್ತನಾಗಿ ಮೋಕ್ಷವನ್ನು ಗಳಿಸಲು ಪರಮಾತ್ಮನಾದ ಶ್ರೀ ಕೃಷ್ಣನಲ್ಲಿ ಪರಿಶುದ್ಧವಾದ ಭಕ್ತಿಯಿಂದ ತೊಡಗಿಸಿಕೊಳ್ಳುವುದೇ ಉನ್ನತವಾದ ಮಾರ್ಗವಾಗಿದೆ, ಶ್ರೀ ಕೃಷ್ಣನು ಈ ವಿಭಾಗದಲ್ಲಿ ತಾನು ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯ ಸಾರಾಂಶವನ್ನು ತಿಳಿಸುತ್ತಾನೆ, ಅಲ್ಲದೇ ತನ್ನ ನಿರ್ಣಯವನ್ನು ಈ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ.
ಧ್ಯಾನಂ
ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಂ
ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ
ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಂ
ನಮೋಸ್ತುತೇ ವ್ಯಾಸ ವಿಶಾಲ ಬುದ್ದೇ ಪುಲ್ಲಾರವಿಂದಾಯತ ಪತ್ರನೇತ್ರ
ಯೇನ ತ್ವಯಾ ಭಾರತ ತೈಲಪೂರ್ಣ: ಪ್ರಜ್ವಲಿತೋ ಜ್ಞಾನಮಯ: ಪ್ರದೀಪ:
ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕ ಪಾಣಯೇ
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮ:
ಸರ್ವೋಪನಿಷದೋ ಗಾವೋ ದೋಗ್ದಾ ಗೋಪಾಲನಂದನ:
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್
ವಸುದೇವಸುತಂ ದೇವಂ ಕಂಸಚಾಣೂರಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
ಭೀಷ್ಮ ದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ
ಅಶ್ವತ್ಥಾಮವಿಕರ್ಣಘೋರಮಕರಾ ದುರೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕ: ಕೇಶವ:
ಪಾರಾಶರ್ಯವಚ: ಸರೋಜಮಮಲಂ ಗೀತಾರ್ಥಗಂಧೋತ್ಕಟಂ
ನಾನಾಖ್ಯಾನಕಕೇಸರಂ ಹರಿಕಥಾಸಂಭೋಧಿತಂ
ಲೋಕೇ ಸಜ್ಜನಷಟ್ ಪದೈರಹರಹ: ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನ: ಶ್ರೇಯಸೇ
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಂ
ಯಂ ಬ್ರಹ್ಮಾ ವರುಣೇಂದ್ರರುದ್ರಮರುತ: ಸ್ತುನ್ವಂತಿ ದಿವ್ಯೈಸ್ತವೈ
ವೇದೈಸಾಂಗಪದಕ್ರಮೋಪನಿಷದೈರ್ಗಾಯಂತಿಯಂ ಸಾಮಗಾ:
ಧ್ಯಾನವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾಂತಂ ನ ವಿದು: ಸುರಾಸುರಗಣಾ ದೇವಾಯ ತಸ್ಮೈ ನಮ:
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್
ವಸುದೇವಸುತಂ ದೇವಂ ಕಂಸಚಾಣೂರಮರ್ಧನಂ
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
ಭೀಷ್ಮ ದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ
ಅಶ್ವತ್ಥಾಮವಿಕರ್ಣಘೋರಮಕರಾ ದುರೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕ: ಕೇಶವ:
ಪಾರಾಶರ್ಯವಚ: ಸರೋಜಮಮಲಂ ಗೀತಾರ್ಥಗಂಧೋತ್ಕಟಂ
ನಾನಾಖ್ಯಾನಕಕೇಸರಂ ಹರಿಕಥಾಸಂಭೋಧಿತಂ
ಲೋಕೇ ಸಜ್ಜನಷಟ್ ಪದೈರಹರಹ: ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನ: ಶ್ರೇಯಸೇ
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಂ
ಯಂ ಬ್ರಹ್ಮಾ ವರುಣೇಂದ್ರರುದ್ರಮರುತ: ಸ್ತುನ್ವಂತಿ ದಿವ್ಯೈಸ್ತವೈ
ವೇದೈಸಾಂಗಪದಕ್ರಮೋಪನಿಷದೈರ್ಗಾಯಂತಿಯಂ ಸಾಮಗಾ:
ಧ್ಯಾನವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ
ಯಸ್ಯಾಂತಂ ನ ವಿದು: ಸುರಾಸುರಗಣಾ ದೇವಾಯ ತಸ್ಮೈ ನಮ: