ಸುಂದರಕಾಂಡ

ಸುಂದರಕಾಂಡ


    ಸುಂದರಕಾಂಡ ಎಂಬುದು ರಾಮಾಯಣವೆಂಬ ಮಹಾಕಾವ್ಯದಲ್ಲಿಯೇ ಅತ್ಯಂತ ಸುಂದರವಾದ, ರಮಣೀಯವಾದ ಕಂಡವಾಗಿದೆ. ಆಂಜನೇಯನ ಮತ್ತೊಂದು ಹೆಸರು ಸುಂದರ ಎಂದಾಗಿರುವುದರಿಂದಲೇ ಈ ಕಂಡಕ್ಕೆ ಸುಂದರಕಾಂಡ ಎಂಬ ಹೆಸರು ಬಂದಿದೆ. ಈ ಕಂಡದಲ್ಲಿನ ಒಂದೊಂದು ಕಾವ್ಯವೂ, ಸೀತಾ-ಆಂಜನೇಯರ ಸಂಭಾಷಣೆ, ಆಂಜನೇಯ-ರಾವಣರ ಸಂಭಾಷಣೆ, ಹನುಮನು ಅಶೋಕವನವನ್ನು, ಸೀತೆಯನ್ನು ಹುಡುಕಿದ ರೀತಿ, ರಾಕ್ಷಸರನ್ನು ಆಟವಾಡಿಸಿದ ರೀತಿ, ಒಂದು ಹಂತದಲ್ಲಿ ಹತಾಶನಾದ ಸಂದರ್ಭ, ಲಂಕೆಗೆ ಬೆಂಕಿಯಿಟ್ಟ ಸನ್ನಿವೇಶ ಎಲ್ಲವೂ ಸಹ ಅತ್ಯಂತ ಸುಂದರವಾಗಿ ಚಿತ್ರಿತವಾಗಿದೆ. ಆದ್ದರಿಂದ ಈ ಕಾಂಡಕ್ಕೆ ಸುಂದರಕಾಂಡ ಎಂದು ಹೆಸರಿಸಿರುವುದು ಅತ್ಯಂತ ಸೂಕ್ತವೆನಿಸುತ್ತದೆ.

       ಒಟ್ಟು 68 ಸರ್ಗಗಳಿಂದ ಕೂಡಿರುವ ಈ ಮಹಾಕಾವ್ಯವು ಜನಸಾಮಾನ್ಯರಿಗೂ ಸರಳವಾಗಿ ಅರ್ಥವಾಗಬೇಕೆಂಬ ಉದ್ಧೇಶದಿಂದ, ಎಲ್ಲರ ಮನದಲ್ಲಿಯೂ ಉಳಿಯಬೇಕೆಂಬ ಉದ್ಧೇಶದಿಂದ ಸರಳವಾದ ಪದಗಳನ್ನುಪಯೋಗಿಸಿ ಇಲ್ಲಿ ನೀಡುತ್ತಿದ್ದು, ಏನಾದರೂ ಬದಲಾವಣೆಗಳ ಅಗತ್ಯವಿದ್ದಲ್ಲಿ ಸಂಪರ್ಕಿಸಬಹುದು.

ಒಂದನೆಯ ಸರ್ಗ

    ಮೊದಲನೆಯ ಸರ್ಗವು ತ್ರೇತಾಯುಗದಲ್ಲಿ ಶ್ರೀರಾಮ ಭಕ್ತನಾಗಿ ಮೆರೆದ ಹನುಂತನಾಗಿಯೂ, ದ್ವಾಪರಯುಗದಲ್ಲಿ ಶ್ರೀಕೃಷ್ಣನ ಭಕ್ತನಾಗಿ ಭೀಮಸೇನನಾಗಿಯೂ, ಹಾಗೂ ಕಲಿಯುಗದಲ್ಲಿ ಜನರನ್ನು ಮೋಕ್ಷಮಾರ್ಗದತ್ತ ಕೊಂಡೊಯ್ದ ಮದ್ವಾಚಾರ್ಯರಾಗಿಯೂ ಜನ್ಮವೆತ್ತಿದ ಮಹಾನುಭಾವನಾದ ಹನುಮಂತನು ಸಾಗರವನ್ನು (ಹಿಂದೂಮಹಾಸಾಗರ) ಹಾರಿದ ಪ್ರಸಂಗವನ್ನು ವಿವರಿಸುತ್ತದೆ. ದಕ್ಷಿಣ ದಿಕ್ಕಿನಲ್ಲಿನ ರಾವಣನ ರಾಜ್ಯವಾದ ಲಂಕಾಪಟ್ಟಣವನ್ನು , ಮಾತೆಯಾದ ಸೀತಾಮಾತೆಯನ್ನು ಹುಡುಕಲು ಹೊರಟ ಮಹಾಮಹಿಮ ಆಂಜನೇಯನು ಪೂರ್ವಾಭಿಮುಖವಾಗಿ ನಿಂತು ತನ್ನ ಜನ್ಮಕ್ಕೆ ಕಾರಣನಾದ ವಾಯುದೇವರನ್ನು ಹಾಗೂ ಮಾತೆ ಅಂಜನಾದೇವಿಯನ್ನು ಮನದಲ್ಲೇ ಸ್ತುತಿಸಿದನು, ಆಶೀರ್ವಾದ ಕೋರಿದನು. ನಂತರದಲ್ಲಿ ಬ್ರಹ್ಮದೇವನಿಗೆ, ಪಂಚಭೂತಗಳಿಗೆ, ಸೂರ್ಯದೇವನಿಗೆ, ಇಂದ್ರನಿಗೆ ಹೀಗೆ ಸಕಲ ದೇವಾಧಿದೇವತೆಗಳಿಗೆ ನಮಸ್ಕಾರವನ್ನು ಸಲ್ಲಿಸಿ ಸೀತಾದೇವಿಯನ್ನು ಹುಡುಕುವ ಕಾರ್ಯದಲ್ಲಿ ಯಶಸ್ಸು ನೀಡಿರೆಂದು ಪ್ರಾರ್ಥಿಸಿದನು ಹಾಗೂ ಹೊರಡಲನುವಾದನು.

     ಮಹಾಸಾಗರವನ್ನು ದಾಟುವುದೆಂದರೆ ಸುಲಭದ ಮಾತಲ್ಲ, ಕಣ್ಣು ಹರಿಸಿದಷ್ಟೂ ನೀರು. ಇಂತಹ ಮಹಾಸಾಗರವನ್ನು ದಾಟುವ ಸಲುವಾಗಿ ಹನುಮಂತನು ತನ್ನ ಶರೀರವನ್ನು ಬೃಹದಾಕಾರವಾಗಿ ಬೆಳೆಸತೊಡಗಿದನು. ಊಹೆಗೂ ನಿಲುಕದಂತೆ ಹನುಮಂತನ ಶರೀರದ ಗಾತ್ರ ಹಿರಿದಾಗತೊಡಗಿತು. ಮನಸ್ಸಿನ ತುಂಬಾ ಶ್ರೀರಾಮರ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಬೇಕೆಂಬ ಹುಮ್ಮಸ್ಸಿನಿಂದಲೂ, ಶ್ರೀರಾಮದೂತನಾಗಿ ಆತನ ಸೇವೆಗೈಯುವ ಮಹಾ ಅದೃಷ್ಟ ದೊರೆತ ಖುಷಿ-ಸಂತೋಷಗಳಿಂದಲೂ ಹನುಮಂತನು ತನ್ನ ಹಾರುವ ವೇಗವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಲಂಕೆಗೆ ವಿರುದ್ಧ ದಿಕ್ಕಿನಲ್ಲಿದ್ದ ಬೃಹದಾಕಾರವಾದ ಪರ್ವತವಾದ ಮಹೇಂದ್ರಪರ್ವತವನ್ನು ತನ್ನೆರೆಡೂ ಕೈಗಳೂ ಹಾಗೂ ಪಾದಗಳಿಂದ ಅತ್ಯಂತ ಬಲವಾಗಿ ಅಪ್ಪಳಿಸಿದನು.

   ಮಹಾಶಕ್ತಿಶಾಲಿಯಾದ ಹನುಮಂತನ ಪ್ರಚಂಡ ಶಕ್ತಿಯುಳ್ಳ ಹೊಡೆತಕ್ಕೆ ಮಹೇಂದ್ರ ಪರ್ವತವೇ ಒಂದೆರೆಡು ಕ್ಷಣ ಅದುರಿಹೋಯಿತು. ಪರ್ವತದ ನೆಲದಾಳದಲ್ಲಿ ಅಡಗಿದ್ದ ಚಿನ್ನ-ಬೆಳ್ಳಿ ಮೊದಲಾದ ನಿಧಿ-ನಿಕ್ಷೇಪಗಳು ಹೊರಗೇ ಕಾಣಲಾರಂಭಿಸಿದವು. ಹನುಮನ ಹೊಡೆತದಿಂದ ಅಲ್ಲೋಲ ಕಲ್ಲೋಲವಾದ ಮಹಾಪರ್ವತದಲ್ಲಿ ಮನೆಮಾಡಿಕೊಂಡಿದ್ದ ಹಲವಾರು ಪ್ರಾಣಿ-ಪಕ್ಷಿಗಳು ಪ್ರಳಯವೇ ಸಂಭವಿಸಿತೇನೋ ಎಂಬಂತೆ ಭಯದಿಂದ ಚೀತ್ಕರಿಸಿದವು, ಆರ್ತನಾದಗೈದವು. ಪ್ರಾಣಭಯದಿಂದ ಕೂಗಿದ ಆ ಪ್ರಾಣಿಪಕ್ಷಿಗಳ ಆರ್ತನಾದವು ಭೂಮ್ಯಾಕಾಶಗಳನ್ನೂ ಒಳಗೊಂಡ ದಶದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು. ಪರ್ವತದಲ್ಲಿ ವಾಸಿಸುತ್ತಿದ್ದ ವಿಷಪೂರಿತವಾದ ಸ್ವಸ್ತಿಕ್ ಗುರುತುಳ್ಳ ಸರ್ಪಗಳು  ಭಯದಿಂದಾಗಿ ಸಿಕ್ಕ ಸಿಕ್ಕ ಕಲ್ಲು-ಬಂಡೆಗಳನ್ನೇ ಕಚ್ಚತೊಡಗಿದವು. ಭಯಾನಕ ವಿಷದೊಂದಿಗೆ ಮಹಾಜ್ವಾಲಾಗ್ನಿಯನ್ನೇ ಹೊರಸೂಸುತ್ತಾ ಕಲ್ಲುಬಂಡೆಗಳಿಗೆ ಸರ್ಪಗಳು ಕಚ್ಚಿದ ಪರಿಣಾಮ ಬೃಹದಾಕಾರವಾದ ಬಂಡೆಗಳೇ ಚೂರುಚೂರಾಗಿ ಸುಟ್ಟು ಹೋದವು. 

      ಪರ್ವತದಲ್ಲಿ ವಾಸಿಸುತ್ತಿದ್ದ ತಪಸ್ವಿಗಳು ಮತ್ತು ಅವರ ಕುಟುಂಬದವರೂ ಹಾಗೂ ಶಿಷ್ಯೋತ್ತಮರು ತಮ್ಮ ತಪೋಶಕ್ತಿಯ ಬಲದಿಂದ ಪರ್ವತದಿಂದ ಮೇಲೆ ಹಾರಿ ಶಾಂತವಾಗಿದ್ದ ಮಹಾಪರ್ವತದಲ್ಲಿ ಇದ್ದಕ್ಕಿದ್ದಂತೆ ಉಂಟಾದ ಈ ಭಯಾನಕ ಬದಲಾವಣೆಗೆ ಕಾರಣವೇನೆಂದು ವೀಕ್ಷಿಸತೊಡಗಿದರು. ನಂತರ ತಪಸ್ವಿಗಳು ತಮ್ಮ ಶಿಷ್ಯೋತ್ತಮರಿಗೂ ಹಾಗೂ ಕುಟುಂಬದವರಿಗೂ ಈ ರೀತಿಯಾಗಿ ಹೇಳಿದರು.

  "ಮಹಾಮಹಿಮನಾದ ಹನುಮಂತನು ಶ್ರೀ ರಾಮನ ಕಾರ್ಯಾರ್ಥವಾಗಿ ಮಹಾಸಾಗರವನ್ನು ದಾಟುವ ದುಸ್ತರವಾದ ಕಾರ್ಯಕ್ಕೆ ಕೈ-ಹಾಕಿರುವನು ಹಾಗೂ ತಿಮಿಂಗಲಗಳಿಗೆ ವಾಸಸ್ಥಾನವಾದ ಈ ಮಹಾಸಾಗರದ ಮತ್ತೊಂದು ದಡವನ್ನು ಸೇರಹೊರಟಿದ್ದಾನೆ" ಎಂದರು. ಇದನ್ನು ಕೇಳಿದ ಶಿಷ್ಯೋತ್ತಮರು ಸಾಗರವನ್ನು ಹಾರಲು ಸಿದ್ಧನಾಗಿದ್ದ ಪರ್ವತರೂಪಿಯಾಗಿ ಬೆಳೆದುನಿಂತಿದ್ದಹನುಮಂತನನ್ನು ನೋಡಿ ಕಣ್ತುಂಬಿಕೊಂಡು ಧನ್ಯರಾದರು.  ನೋಡುತ್ತಿದ್ದಂತೆಯೇ ಹಾನಾದವನ್ನು ಮಾಡುತ್ತಾ ಹನುಮನು ರೋಮಭರಿತವಾದ ಬಾಲವನ್ನು ಮೇಲಕ್ಕೆ ಎತ್ತಿ ನೆಲಕ್ಕೆ ಪ್ರಚಂಡ ಶಕ್ತಿಯೊಂದಿಗೆ ಅಪ್ಪಳಿಸಿದನು. ಪರ್ವತವನ್ನು ಗುದ್ದಿದ ಎರೆಡೂ ಕೈಗಳನ್ನು ಮತ್ತಷ್ಟು ಬಿಗಿಗೊಳಿಸಿ  ನಡುವನ್ನು ಹಾಗೂ ಕಾಲುಗಳನ್ನು ಮುದುಡಿಕೊಂಡನು. ಕತ್ತನ್ನು ಬಗ್ಗಿಸಿ, ಭುಜಗಳನ್ನು ಮತ್ತಷ್ಟು ತಗ್ಗಿಸಿ ಆಕಾಶವನ್ನೇ ನೋಡುತ್ತಾ ಉಸಿರು ಬಿಗಿ ಹಿಡಿದು ಹಾರಲು ಸನ್ನದ್ಧನಾದನು. 

      ಹಾರುವ ಮುನ್ನ ವಾನರಶ್ರೇಷ್ಟರೊಂದಿಗೆ ಈ ರೀತಿ ಹೇಳಿದನು. ಲಂಕೆಗೆ ಹಾರಿದ ನಂತರ ಅಲ್ಲಿ ಸೀತಾಮಾತೆ ಕಾಣದಿದ್ದಲ್ಲಿ, ರಾಅವಣನನ್ನೇ ಕಟ್ಟಿ, ರಾವಣಸಹಿತನಾದ ಲಂಕಾಪಟ್ಟಣವನ್ನೊಳಗೊಂಡ ಲಂಕಾಪರ್ವತವನ್ನೇ ಬುಡಸಹಿತ ಕಿತ್ತು ತರುವೆನೆಂದು ಹೇಳಿ ಹನುಮದೇವನು ತನ್ನೆಲ್ಲಾ ಶಕ್ತಿಯನ್ನೆಲ್ಲ ಒಮ್ಮೆಲೇ ಒಗ್ಗೂಡಿಸಿಕೊಂಡು ರಭಸದಿಂದ ಆಕಾಶದತ್ತ ಹಾರಿದನು.


   ಹನುಮಂತನು ಆಕಾಶಕ್ಕೆ ನೆಗೆದು ಹಾರಿದ ರಭಸಕ್ಕೆ ಪರ್ವತದಲ್ಲಿನ ಗಿಡಮರಗಳೇ ಬುಡಸಮೇತ ಕಿತ್ತು ಬಂದವು ಹಾಗೂ ಬೃಹದಾಕಾರದ ಕೊಂಬೆಗಳೇ ಮುರಿದುಕೊಂಡು ಬಂದು ಹನುಮಂತನನ್ನೇ ಹಿಂಬಾಲಿಸಿದವು. ಸ್ವಲ್ಪದೂರ ಹಿಂಬಾಲಿಸಿ ಸಮುದ್ರದೊಳಗೆ ಪಟಪಟನೆ ಉದುರಿದವು. ಹನುಮಂತನನ್ನೇ ಹಿಂಬಾಲಿಸಿ ಬಂದ ಪರ್ವತದಲ್ಲಿದ್ದ ಹಲವು ರೀತಿಯ ಹೂವುಗಳೆಲ್ಲಾ ಸಮುದ್ರದಲ್ಲೆಲ್ಲಾ ಚೆಲ್ಲಾಡಿ ಸಮುದ್ರವೂ ಸಹ ವಿವಿಧ ರೀತಿಯ ನಕ್ಷತ್ರಗಳನ್ನೊಳಗೊಂಡ ಹೊಳೆಯುವ ಆಕಾಶದಂತೆ ಕಂಗೊಳಿಸತೊಡಗಿತು.

      ಹನುಮಂತನು ಆಕಾಶದಲ್ಲಿ ಮೋಡಗಳ ನಡುವಲ್ಲಿ ಹೋಗುತ್ತಿದ್ದುದರಿಂದ ಮತ್ತೆ ಮತ್ತೆ ಮೋಡದೊಳಗೆ ಹೋಗಿಬರುವ ಚಂದ್ರನಂತೆ ಕಂಡುಬರುತ್ತಿದ್ದನು. ದೈವಾಂಶ ಸಂಭೂತನಾದ ಶ್ರೀರಾಮನ ಕಾರ್ಯಾರ್ಥವಾಗಿ ಹೋಗುತ್ತಿದ್ದುದರಿಂದ ಹನುಮನಿಗೆ ಸೂರ್ಯನು ತನ್ನ ಶಾಖ ತಟ್ಟದಂತೆ ಎಚ್ಚರವಹಿಸಿದನು, ದೇವತೆಗಳು, ಗಂಧರ್ವರು ಹೂವಿನ ಮಳೆಯನ್ನೇ ಸುರಿಸಿದರು, ಮನಸಿಗೆ ಹಾಗೂ ದೇಹಕ್ಕೆ ಹಿತವಾಗುವಂತೆ ವಾಯುದೇವನು ಗಾಳಿಯನ್ನು ಬೀಸಲಾರಂಭಿಸಿದನು.  ಇಷ್ಟೆಲ್ಲಾ ನಡೆಯುತ್ತಿರುವಾಗ ಸಮುದ್ರ ರಾಜನು ಆಲೋಚಿಸಿದನು. ಸಾಕ್ಷಾತ್ ಹರಿಯೇ ಅಪರಾವತಾರವೇ ಆಗಿರುವ ಶ್ರೀರಾಮನ ಕಾರ್ಯಾರ್ಥವಾಗಿ ಮಹಾಸಾಗರವನ್ನೇ ದಾಟಲು ಹೊರಟಿರುವ ಹನುಮಂತನಿಗೆ ಎಲ್ಲಾ ದೇವತೆಗಳೂ, ಗಂಧರ್ವರೂ ಸಹ ತಮ್ಮ ಕೈಲಾದ ಸಹಕಾರವನ್ನು ನೀಡುತ್ತಿದ್ದಾರೆ. ಸಮುದ್ರರಾಜನಾದ ನಾನು ಹನುಮಂತನಿಗೆ ಸಹಾಯವನ್ನು ಮಾಡದಿದ್ದರೆ ಅದು ಮುಂದೆ ನನಗೆ ಕೆಟ್ಟ ಹೆಸರನ್ನು ತಂದುಕೊಡುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಾನೂ ಸಹ ಹನುಮನಿಗೆ ಸಾಗರ ದಾಟುವಲ್ಲಿ ಏನಾದರೂ ಸಹಾಯವನ್ನು ಮಾಡಬೇಕು ಎಂದು ನಿರ್ಧರಿಸಿದನು. 

   ಹೀಗೆ ನಿರ್ಧರಿಸಿದ ಸಮುದ್ರರಾಜನು ತನ್ನ ಒಡಲಿನಲ್ಲಿ ಬೃಹದಾಕಾರವಾಗಿ ಬೆಳೆದು ಅಡಗಿದ್ದ ಪರ್ವತವಾದ ಮೈನಾಕನಿಗೆ ಹೀಗೆಂದು ಹೇಳಿದನು. ಎಲೆ ಮೈನಾಕನೇ ಸಮುದ್ರದ ಆಳದಲ್ಲಿ ಜೀವಿಸಬಹುದಾದ ಜೀವಿಗಳಿಗೂ, ರಾಕ್ಷಸರಿಗೂ ಆವಾಸಸ್ಥಾನವಾಗಿ ದೇವೇಂದ್ರನಿಂದಲೇ ಇಲ್ಲಿರಿಸಲ್ಪಟ್ಟಿರುವ ನೀನು ಮೇಲಕ್ಕೆ ಬೆಳೆಯುವ ಹಾಗೂ ಕೆಳಕ್ಕೂ ಬೆಳೆಯುವ ಶಕ್ತಿಯನ್ನು ಹೊಂದಿರುವೆ. ಆದುದರಿಂದ ನಿನ್ನಲ್ಲಿ ನಾನು ಈ ರೀತಿ ಕೇಳಿಕೊಳ್ಳುತ್ತಿದ್ದೇನೆ.  ಇಕ್ಶ್ವಾಕುವಂಶದ ಮಂತ್ರಿಯಾದ ಕಪಿಶ್ರೇಷ್ಟನಾದ ಹನುಮಂತನು ವಾಯುಮಾರ್ಗದಲ್ಲಿ ಶ್ರೀರಾಮನ ಕಾರ್ಯಾರ್ಥವಾಗಿ ಮಹಾಸಾಗರವನ್ನು ದಾಟಲು ಹೊರಟಿದ್ದು, ನಿನ್ನ ಮೇಲೆಯೇ ಬರುತ್ತಿದ್ದಾನೆ. ನೀನು ನೀರಿನಿಂದ ಮೇಲಕ್ಕೆ ಬೆಳೆದು, ವಾಯುಮಾರ್ಗದಲ್ಲಿ ಸಂಚರಿಸುತ್ತಿರುವ ಹನುಮಂತನು ನಿನ್ನಲ್ಲಿ ಕುಳಿತು ವಿಶ್ರಮಿಸಿಕೊಳ್ಳುವಲ್ಲಿ ಸಹಕಾರ ನೀಡು, ಸ್ವಲ್ಪ ಹೊತ್ತು ವಿಶ್ರಮಿಸಿ ಹನುಮಂತನು ಉಳಿದ ಸಾಗರವನ್ನು ದಾಟುವನು. ಹೀಗೆಂದು ಸಮುದ್ರರಾಜನು ಮೈನಾಕನಲ್ಲಿ ಬಿನ್ನವಿಸಿಕೊಂಡನು

    ಸಮುದ್ರ ರಾಜನ ಮಾತುಗಳನ್ನು ಕೇಳಿದ ಮೈನಾಕನು ತಕ್ಷಣವೇ ಸೂರ್ಯನ ಕಿರಣಗಳು ಮೋಡಗಳನ್ನು ಸೀಳಿಕೊಂಡು ಬರುವಂತೆ ಮೈನಾಕನು ಸಮುದ್ರದ ನೀರನ್ನು ಸೀಳಿಕೊಂಡು ಮೇಲಕ್ಕೆದ್ದನು. ಮೈನಾಕನು ಇದ್ದಕ್ಕಿದ್ದ ಹಾಗೆಯೇ ಸಮುದ್ರದಿಂದ ಮೇಲಕ್ಕೆಂದು ಬಂದುದನ್ನು ಗಮನಿಸಿದ ಹನುಮಂತನು ನನ್ನ ಪ್ರಯಾಣಕ್ಕೆ ಧಕ್ಕೆ ಉಂಟು ಮಾಡಲೆಂದೇ ಯಾವುದೋ ತೊಂದರೆ ಎದುರಾಗುತ್ತಿದೆಯೆಂದು ಭಾವಿಸಿದನು. ಆದುದರಿಂದ ಅತ್ಯಂತ ರಭಸವಾಗಿ ಬಂದು ಪ್ರಚಂಡ ಶಕ್ತಿಯಿಂದ ತನ್ನೆದೆಯನ್ನೇ ಉಪಯೋಗಿಸಿ ಮೈನಾಕನನ್ನು ಹೊಡೆದು ಕೆಡವಿದನು. ಮಹಾನುಭಾವನಾದ ಹನುಮಂತನ ಸಾಮರ್ಥ್ಯವನ್ನರಿತ ಮೈನಾಕನು ಮನುಷ್ಯ ರೂಪವನ್ನು ತಾಳಿ, ವಾನರೋತ್ತಮನೇ ಮಹಾಸಾಗರವನ್ನು ದಾಟುವ ಅತ್ಯಂತ ದುಸ್ತರವಾದ ಕಾರ್ಯಕ್ಕೆ ಕೈಹಾಕಿರುವೆ. ಆದುದರಿಂದ ಸಮುದ್ರರಾಜನ ಆಜ್ಞೆಯನ್ನು ಶಿರಸಾವಹಿಸಿ ನಿನಗೆ ಆಶ್ರಯ ನೀಡಲು ಬಂದಿರುವೆನು, ನನ್ನ ಶಿಖರಗಳಲ್ಲಿ ವಿಶ್ರಾಂತಿಯನ್ನು ತೆಗೆದುಕೋ. ನನ್ನ ಈ ಶಿಖರಗಳಲ್ಲಿಯೇ ಹಲವಾರು ರೀತಿಯ ಫಲಗಳುಂಟು ಅವುಗಳನ್ನು ಸೇವಿಸಿ ವಿಶ್ರಾಂತಿ ತೆಗೆದುಕೋ, ನಂತರ ಮುಂದಿನ ಹಾದಿಯನ್ನು ಕ್ರಮಿಸುವಂತವನಾಗು ಎಂದು ಮೈನಾಕನು ಹೇಳಿದನು.

    ಮೈನಾಕನು ಇನ್ನೂ ಮುಂದುವರಿದು ಹೇಳುತ್ತಾ, ಪವನಪುತ್ರನೇ ನನಗೂ ನಿನಗೂ ಬಹಳ ಹತ್ತಿರದ ಸಂಬಂಧವುಂಟು, ಹಿಂದೆ ಪರ್ವತಗಳಿಗೂ ಸಹ ರೆಕ್ಕೆಗಳಿದ್ದವು, ಅವು ಒಂದೆಡೆಯಿಂದ ಮತ್ತೊಂದೆಡೆಗೆ ಹಾರಾಡುತ್ತಿದ್ದವು, ಹಾರಾಡುವಾಗ ಋಷಿ, ಮುನಿಗಳಿಗೆ, ಜನರಿಗೆ ಎಲ್ಲಿ ಈ ಪರ್ವತಗಳು ತಮ್ಮ ಮೇಲೆ ಬೀಳುವುವೋ ಎಂಬ ಭಯದಿಂದಲೇ ಬದುಕುತ್ತಿದ್ದರು. ಇದನ್ನು ಮನಗಂಡ ದೇವೇಂದ್ರನು ತನ್ನ ವಜ್ರಾಯುಧದಿಂದ ಎಲ್ಲಾ ಪರ್ವತಗಳ ರೆಕ್ಕೆಗಳನ್ನೂ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಹಾಕುತ್ತಾ ಬಂದನು ಆದರೆ ಇನ್ನೇನು ನನ್ನ ರೆಕ್ಕೆಗಳನ್ನು ಕತ್ತರಿಸಲು ದೇವೇಂದ್ರನು ನನ್ನ ಬಳಿಗೆ ಬರುವಷ್ಟರಲ್ಲಿಯೇ ನಿನ್ನ ಪಿತನಾದ ವಾಯುದೇವನು ನನ್ನನ್ನು ಎತ್ತಿಕೊಂಡು ಬಂದು ಈ ಸಮುದ್ರದಲ್ಲಿರಿಸಿದನು. ಹೀಗಾಗಿ ನನ್ನ ರೆಕ್ಕೆಗಳು ಹಾಗೆಯೇ ಉಳಿದುಕೊಂಡವು. ನಿನ್ನ ತಂದೆಯು ನನಗೆ ಮಾಡಿದ ಉಪಕಾರದ ಋಣದ ಭಾರ ನನ್ನ ಮೇಲಿದೆ, ಆ ಋಣದ ಭಾರವನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳಲು ನನಗೆ ಅವಕಾಶವನ್ನು ಕೊಡು, ನನ್ನ ಪರ್ವತಗಳ ಮೇಲೆ ನೀನು ವಿಶ್ರಾಂತಿಯನ್ನು ಪಡೆ, ಆಯಾಸವನ್ನು ನೀಗಿಸಿಕೋ ಎಂದು ಮೈನಾಕನು ಹನುಮಂತನಲ್ಲಿ ಬಿನ್ನವಿಸಿಕೊಂಡನು. ದಯವಿಟ್ಟು ನಮ್ಮ ಪ್ರೀತಿ-ವಿಶ್ವಾಸಗಳಿಗೆ ಗೌರವವನ್ನು ನೀಡು, ನಿನ್ನ ದರ್ಶನದಿಂದ, ಆಗಮನದಿಂದ ನಮಗೆ ಅತೀವವಾದ ಸಂತೋಷವಾಗಿದೆ ಎಂದನು ಮೈನಾಕನು. 

       ಹೀಗೆ ಸಮುದ್ರರಾಜ ಹಾಗೂ ಮೈನಾಕನ ಮಾತುಗಳನ್ನು ಕೇಳಿದ ಕಪಿಶ್ರೇಷ್ಟನು ನಿಮ್ಮ ಪ್ರೀತಿ-ಗೌರವಗಳಿಗೆ ನಾನು ಧನ್ಯನಾದೆನು. ಆದರೆ ಶ್ರೀರಾಮನ ಕಾರ್ಯಾಅರ್ಥವಾಗಿ ಹೊರಟಿರುವ ನಾನು ಕಾರ್ಯಸಾಧನೆಯಾಗುವವರೆಗೂ ಎಲ್ಲಿಯೂ ಕಿಂಚಿತ್ತೂ ವಿಶ್ರಾಂತಿ ಪಡೆಯುವುದಿಲ್ಲವೆಂದು ಮಾತು ನೀಡಿದ್ದೇನೆ. ಆದುದರಿಂದ ನಾನು ತ್ವರಿತವಾಗಿ ಗಮ್ಯವನ್ನು ಸೇರಬೇಕಿದೆ. ವಿಶ್ರಾಂತಿಯನ್ನು ಪಡೆಯಲಾಗುವುದಿಲ್ಲ. ಈಗಾಗಲೇ ಹಗಲು ಮುಕ್ತಾಯವಾಗುತ್ತಿದೆ. ನಾನು ಹೊರಡಬೇಕು ಎಂದು ಹೇಳಿದ ಹನುಮಂತನು ಮೈನಾಕನ ತಲೆಯನ್ನು ಪ್ರೀತಿಯಿಂದ ನೇವರಿಸಿ ಆಕಾಶಮಾರ್ಗಕ್ಕೆ ನೆಗೆದನು.

     ಮೈನಾಕನು ವಿಶ್ರಾಂತಿ ಪಡೆಯೆಂದರೂ ಒಲ್ಲದೇ ಶ್ರೀರಾಮನ ಕಾರ್ಯಕ್ಕೋಸ್ಕರ ಅತಿ ಕ್ಲಿಷ್ಟಕರವಾದ ಕಾರ್ಯಕ್ಕೆ ಮುನ್ನೆಡೆದ ಹನುಮಂತನನ್ನು ಎಲ್ಲಾ ಋಷಿ ಮುನಿಗಳು, ದೇವತೆಗಳು ಕೊಂಡಾಡಿದರು ಹಾಗೂ ಆಶೀರ್ವದಿಸಿದರು. ಹನುಮಂತನಿಗೆ ವಿಶ್ರಾಂತಿ ನೀಡಲೆಂದು ಈ ಮೂಲಕ ರಾಮನ ಕಾರ್ಯಕ್ಕೆ ಸಹಕಾರ ನೀಡಲು ಸಮುದ್ರದಿಂದ ಹೊರಬಂದ ಸುನಾಭ ಎಂಬ ಹೆಸರಿನಂದಲೇ ಕರೆಯಲ್ಪಡುವ ಮೈನಾಕನನ್ನು ಕಂಡು ದೇವೇಂದ್ರನು ಪ್ರಸನ್ನನಾದನು. ಎಲೈ ಮೈನಾಕನೇ ನಿನ್ನ ಕಾರ್ಯವನ್ನು ಕಂಡು ನನಗೆ ಅತೀವವಾದ ಸಂತೋಷವಾಯಿತು, ನಿನಗೆ ನಾನು ಅಭಯವನ್ನು ನೀಡುತ್ತಿದ್ದೇನೆ. ನೀನು ನಿನ್ನ ರೆಕ್ಕೆಗಳನ್ನುಪಯೋಗಿಸಿ ಎಲ್ಲಿ ಬೇಕಾದರೂ ಹಾರಾಡಬಹುದು ಎಂದು ದೇವೇಂದ್ರನು ಹೇಳಿದನು. ಇದನ್ನು ಕೇಳಿ ಅತ್ಯಂತ ಸಂತೋಷಭರಿತನಾಗಿ ಯಾವುದೇ ಭಯಾತಂಕಗಳಿಲ್ಲದೇ ಸಮುದ್ರದಿಂದ ಹೊರಬಂದನು. 

  ಇತ್ತ ಆಂಜನೇಯನು ಕ್ಷಣಮಾತ್ರದಲ್ಲಿಯೇ ಆ ಪ್ರದೇಶವನ್ನು ದಾಟಿ ವಾಯುವೇಗದಲ್ಲಿ ನಿರ್ಮಲವಾದ ಆಕಾಶದಲ್ಲಿ ಮೋಡಗಳನ್ನು ಸೀಳಿಕೊಳ್ಳುತ್ತಾ ಹೋಗುತ್ತಿದ್ದನು. ಇದನ್ನು ಕಂಡ   ದೇವತೆಗಳು ಆಂಜನೇಯನ ಬಲ-ಪರಾಕ್ರಮಗಳನ್ನು ನೋಡಲು ಬಯಸಿ, ನಾಗಮಾತೆಯಾದ ಸುರಸೆಗೆ ಈ ರೀತಿ ಹೇಳಿದರು. "ಮಹಾನ್ ತೇಜಸ್ಸನ್ನು ಹೊಂದಿರುವ ಪವನ ಪುತ್ರನಾದ ಹನುಮಂತನು ಇದೇ ಸಮುದ್ರದ ಮೇಲೆ ಹಾರುತ್ತಾ ಹೋಗುತ್ತಿದ್ದಾನೆ, ನೀನು ಭಯಾನಕವಾದ ಕೋರೆ ಹಲ್ಲುಗಳನ್ನು ಹೊಂದಿ ಹಚ್ಚನೆಯ ಮುಖದಿಂದಲೂ ಕೂಡಿ ದೈತ್ಯಾಕಾರವಾದ ಪರ್ವತರೂಪಿಯಾದ ರಾಕ್ಷಸ ರೂಪವನ್ನು ತಾಳಿ ಸ್ವಲ್ಪಸಮಯ ಹನುಮಂತನ ಪ್ರಯಾಣಕ್ಕೆ ವಿಘ್ನವನ್ನೊಡ್ಡು. ನಮಗೆ ಆಂಜನೇಯನ ಪರಾಕ್ರಮಗಳನ್ನು ನೋಡಲು ಆಸೆಯಾಗಿದೆ. ಅವನು ಎದುರಾದ ವಿಘ್ನಕ್ಕೆ ಚಿಂತಿಸಿ ದು:ಖಪಡುವನೋ ಅಥವಾ ಬುದ್ಧಿವಂತಿಕೆಯಿಂದ ಗೆಲ್ಲುವನೋ ನೋಡಬೇಕಿದೆ" ಎಂದು ಹೇಳಿದರು. 


   ದೇವತೆಗಳಿಂದ ಆಜ್ಞಾಪಿಸಲ್ಪಟ್ಟ ನಾಗಮಾತೆಯಾದ ಸುರಸೆಯು ತಕ್ಷಣವೇ ಅತ್ಯಂತ ವಿಕಾರರೂಪವನ್ನೂ ದೈತ್ಯರೂಪವನ್ನೂ ಧರಿಸಿ  ಸಮುದ್ರದಿಂದ ಮೇಲೆ ಬಂದು ಆಂಜನೇಯನಿಗೆ ಅಡ್ಡಿಯಾಗಿ ನಿಂತಳು. ಅಡ್ಡಿಯಾಗಿ ನಿಂತ ಸುರಸೆಯು ಹನುಮನನ್ನು ಕುರಿತು "ವಾನರೋತ್ತಮನೇ ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ಕಳುಹಿಸಿಕೊಟ್ಟಿರುವರು, ನೀನು ನನ್ನ ಬಾಯಿಯ ಒಳಗೆ ಹೋದರೆ ನಾನು ನಿನ್ನನ್ನು ನನ್ನ ಆಹಾರವಾಗಿ ಭಕ್ಷಿಸುತ್ತೇನೆ" ಎಂದಳು. ಇದನ್ನು ಕೇಳಿದ ಹನುಮಂತನು ವಿನಮ್ರನಾಗಿ ಸುರಸೆಯಲ್ಲಿ "ಅಯೋಧ್ಯಾ ಚಕ್ರವರ್ತಿ ದಶರಥ ಮಹಾರಾಜನ ಪುತ್ರನಾದ ಶ್ರೀರಾಮಚಂದ್ರ ಮೂರ್ತಿಯು ತಮ್ಮ ಲಕ್ಷ್ಮಣ ಹಾಗೂ ಪತ್ನಿಯಾದ ಸೀತಾಮಾತೆಯೊಂದಿಗೆ ಅರಣ್ಯಕ್ಕೆ ಬಂದನು, ಆದರೆ ರಾಕ್ಷಸರಿಗೆ ಮೃತ್ಯುಪ್ರಾಯನಾದ ಶ್ರೀರಾಮನ ಪತ್ನಿಯನ್ನು ಲಂಕಾಧಿಪತಿಯಾದ ರಾವನನು ಅಪಹರಿಸಿದ್ದಾನೆ. ಆಕೆಯ ಇರುವಿಕೆಯನ್ನು ಶೋಧಿಸಲು ಶ್ರೀರಾಮಚಂದ್ರನ ಆಜ್ಞೆಯನ್ನು ಪಾಲಿಸುವ ಸಲುವಾಗಿ ಲಂಕೆಗೆ ತೆರಳುತ್ತಿರುವೆನು. ನನ್ನ ಈ ಕಾರ್ಯದಲ್ಲಿ ನಿನ್ನ ಸಹಕಾರವನ್ನು ಕೋರುತ್ತೇನೆ. ನೀನು ಸಹಕರಿಸಿದಲ್ಲಿ ಸೀತೆಯನ್ನು ಕಂಡು, ಆಕೆಯ ಇರುವಿಕೆಯ ಕುರಿತಾದ ಸಂತೋಷದ ಸುದ್ಧಿಯನ್ನು ಶ್ರೀರಾಮ ಚಂದ್ರನಲ್ಲಿ ಪೇಳಿ ನಾನಾಗಿಯೇ ನಿನ್ನ ಬಾಯಿಗೆ ಬಂದು ಪ್ರವೇಶಿಸುತ್ತೇನೆ" ಎಂದನು. 

ಹನುಮಂತನ ವಿನಮ್ರತೆಯ ನುಡಿಗಳಿಗೆ ಬೆಲೆ ನೀಡದೆ ಸುರಸೆಯು "ನೀನು ನನ್ನನ್ನು ದಾಟಿ ಹೋಗುವಂತಿಲ್ಲ, ನೀನು ನನಗೆ ಬ್ರಹ್ಮದೇವನಿಂದ ಆಹಾರದ ರೂಪದಲ್ಲಿ ದೊರೆತಿರುವ ವರ, ಆದುದರಿಂದ ನೀನು ನನ್ನ ಬಾಯಿಯನ್ನು ಪ್ರವೇಶಿಸಲೇಬೇಕು" ಎಂದಳು. ಹಾಗೂ ಬಾಯಿಯನ್ನು ಅಗಲವಾಗಿ ತೆರೆದು ನಿಂತಳು. ಇದನ್ನು ನೋಡಿದ ಹನುಮಂತನು ಹಸನ್ಮುಖಿಯಾಗಿ "ಸುರಸೆಯೇ ನೀನು ನನ್ನನ್ನು ಪ್ರವೇಶಿಸಲು ಸಾಧ್ಯವಾಗುವಂತೆ ನಿನ್ನ ಬಾಯಿಯನ್ನು ಹಿರಿದಾಗಿಸು" ಎಂದು 10 ಯೋಜನೆ ಚದರಳತೆಗೆ ಬೆಳೆದನು. ಇದನ್ನು ಕಂಡ ಸುರಸೆಯು 20 ಯೋಜನ ಚದರಳತೆಯಷ್ಟು ದೊಡ್ಡದಾಗಿ ತನ್ನ ಬಾಯಿಯನ್ನು ಹಿರಿದಾಗಿಸಿದಳು. ಹನುಮಂತನು 30 ಯೋಜನ ಚದರಳತೆಗೆ ಬೆಳೆದನು, ಸುರಸೆಯು 40 ಯೋಜನ ಚದರಳತೆಯಷ್ಟು ದೊಡ್ಡದಾಗಿ ತನ್ನ ಬಾಯಿಯನ್ನು ಹಿರಿದಾಗಿಸಿದಳು. ಈಗ ಹನುಮಂತನು ತನ್ನದೇಹವನ್ನು 50 ಯೋಜನ ಚದರಳತೆಯಷ್ಟು ಬೆಳೆಸಿದನು, ಇದನ್ನು ಕಂಡ ಸುರಸೆಯು ತನ್ನ ಬಾಯಿಯನ್ನು 60 ಯೋಜನ ಚದರಳತೆಯಷ್ಟು ದೊಡ್ಡದಾಗಿ ತನ್ನ ಬಾಯಿಯನ್ನು ಹಿರಿದಾಗಿಸಿದಳು. ಅದೇ ರೀತಿ ಹನುಮಂತನು 70, 80, 90 ಯೋಜನ ಚದರಳತೆಯಷ್ಟು ತನ್ನ ದೇಹವನ್ನು ಬೆಳೆಸುತ್ತಾ ಹೋದಂತೆ ಸುರಸೆಯು ತನ್ನ ಬಾಯಿಯನ್ನು 80, 90, 100 ಚದರಳತೆಯಷ್ಟು ವಿಶಾಲವಾಗಿ ತೆರೆದಳು. ಇದನ್ನು ಕಂಡ ಹನುಮಂತನು ಜಾಣ್ಮೆಯಿಂದ ತನ್ನ ಶರೀರವನ್ನು ಏಕಾಏಕಿ ಹೆಬ್ಬೆಟ್ಟಿನ ಗಾತ್ರಕ್ಕೆ ಕುಗ್ಗಿಸಿ ಶರವೇಗದಿಂದ ಸುರಸೆಯು ಪ್ರತಿಕ್ರಿಯಿಸುವ ಮುನ್ನವೇ ಸುರಸೆಯ ವಿಶಾಲವಾದ ಬಾಅಯಿಯನ್ನು ಪ್ರವೇಶಿಸಿ ಹೊರಬಂದನು. ಹೊರಬಂದು  ಸುರಸೆಗೆ ನಮಸ್ಕರಿಸಿ, "ದಕ್ಷ ಪುತ್ರಿಯೇ ಬ್ರಹ್ಮದೇವನಿಂದ ನೀನು ಪಡೆದ ವರ ಸತ್ಯವಾಗಲಿ, ನಿನ್ನಿಚ್ಚೆಯಂತೆಯೇ ನಿನ್ನ ಬಾಯಿಗೆ ಪ್ರವೇಶಿಸಿ ಹೊರಬಂದಿದ್ದೇನೆ, ಇನ್ನು ನನ್ನ ಕಾರ್ಯಕ್ಕೆ ಅನುವು ಮಾಡಿಕೊಡು" ಎಂದು ಹೇಳಿದನು. 

ರಾಹುವಿನ ಹಿಡಿತದಿಂದ ಹೊರಬಂದ ಚಂದ್ರನಂತೆ ಕಂಗೊಳಿಸುತ್ತಿದ್ದ ಹನುಮಂತನ ಸೌಮ್ಯ ರೂಪವನ್ನು ಕಂಡು ಸುರಸಾದೇವಿಯು "ಎಲೈ ಕಪಿವರೇಣ್ಯನೇ ಇನ್ನು ನಿನ್ನನ್ನು ಅಡ್ಡಿಪಡಿಸಲಾರೆನು, ನೀನು ನಿನ್ನ ಕಾರ್ಯವನ್ನು ಮುಂದುವರೆಸು, ಮಹಾತ್ಮನಾದ ಶ್ರೀರಾಮನ ಪತ್ನಿಯಾದ ಸೀತಾಮಾತೆಯನ್ನು ರಾಮನ ಬಳಿ ಸೇರಿಸು, ನಿನಗೆ ಶುಭವಾಗಲಿ" ಎಂದಳು. ತಕ್ಷಣವೇ ಹನುಮಂತನು ವಾಯುವೇಗದಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿದನು. ಸಾಕ್ಷಾತ್ ಗರುಡದೇವನಂತೆ ಹನುಮಂತನು ಸೂರ್ಯ, ಚಂದ್ರ, ನಕ್ಷತ್ರ, ಮಹಾಮಹಿಮ ಋಷಿಗಳು, ಗಂಧರ್ವ, ಯಕ್ಷ, ಕಿನ್ನರರು, ದೇವೇಂದ್ರನ ಐರಾವತವು, ವೀರರಿಂದಲೂ ಕೂಡಿರುವ ನಿರ್ಮಲವಾದ ಆಕಾಶಮಾರ್ಗದಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿದನು

      ಹನುಮನು ತನ್ನ ಪ್ರಯಾಣವನ್ನು ರಾಮನ ಬಾಣವು ಗುರಿಯನ್ನು ತಲುಪುವಲ್ಲಿ ಹೇಗೆ ತನ್ನೆಲ್ಲಾ ಅಡೆತಡೆಗಳನ್ನು ಸೀಳಿಕೊಂಡು ಹೋಗುತ್ತದೆಯೋ ಹಾಗೆಯೇ ಆಕಾಶ ಮಾರ್ಗದಲ್ಲಿ ಬರುವು ಮೋಡಗಳನ್ನು ಸೀಳಿಕೊಂಡು ಹೋಗುತ್ತಿದ್ದನು. ಬೃಹದಾಕಾರವಾದ ಗಾತ್ರವನ್ನು ಹೊಂದಿದ್ದ ಹನುಮಂತನನ್ನು ನೋಡಿದ ಸಿಂಹಿಕೆಯೆಂಬ ರಾಕ್ಷಸಿಯು, "ಬಹಳ ದಿನಗಳಿಂದ ಎದುರು ನೋಡುತ್ತಿದ್ದ ಆಹಾರವು ನನಗೆ ಈಗ ಲಭ್ಯವಾಯಿತು" ಎಂದು ಖುಷಿಯಿಂದ ದೈತ್ಯಾಕಾರದ ಹನುಮಂತನ ನೆರಳನ್ನು ಹಿಡಿದೆಳೆದಳು. ಇದ್ದಕ್ಕಿದ್ದ ಹಾಗೆಯೇ ತನ್ನ ವೇಗವು ಕುಸಿದು ಹೋದುದನ್ನು ಕಂಡ ಹನುಮಂತನು, "ಇದೇನು ಇದ್ದಕ್ಕಿದ್ದ ಹಾಗೆ ನನ್ನ ಪರಾಕ್ರಮವು ಕುಗ್ಗಿಹೋಯಿತು, ನಾನೇಕೆ ಹೀಗೆ ಹಿಡಿಯಲ್ಪಟ್ಟಿರುವೆನು?" ಎಂದು ಆಶ್ಚರ್ಯದಿಂದ ಸುತ್ತಲೂ ಮೇಲೂ ಹಾಗೂ ಕೆಳಗೂ ಒಮ್ಮೆ ಗಮನಿಸಿದನು. ಆಗ ತನ್ನ ನೆರಳನ್ನು ಹಿಡಿದಿರುವ ಸಮುದ್ರದಿಂದ ಮೇಲೆದ್ದು ನಿಂತಿರುವ ವಿಚಿತ್ರ ಹಾಗೂ ಭಯಾನಕ ರೂಪದ ಜೀವಿಯನ್ನು ಕಂಡನು. ಆಗ ಹನುಮಂತನಿಗೆ ಸುಗ್ರೀವನು ಹೇಳಿದ ನೆರಳನ್ನು ಹಿಡಿಯಬಲ್ಲ ಜೀವಿಯ ಕುರಿತು ನೆನಪಾಯಿತು. ಸುಗ್ರೀವನು ಹೇಳಿದ ನೆರಳನ್ನೂ ಸಹ ಹಿಡಿಯಬಲ್ಲ ಜೀವಿಯು ಇದೇ ಇರಬೇಕು ಎಂದು ಹನುಮಂತನು ಭಾವಿಸಿದನು. 

     ಹನುಮಂತನ ನೆರಳನ್ನು ಹಿಡಿದು ಅಡ್ಡಗಟ್ಟಿದ್ದ ಸಿಂಹಿಕೆಯ ಶಕ್ತಿ-ಪರಾಕ್ರಮ ಹಾಗೂ ಅಗತ್ಯವನ್ನರಿತ ವಾನರೇಂದ್ರನು ತಕ್ಷಣವೇ ತನ್ನ ದೇಹವನ್ನು ಮತ್ತಷ್ಟು ಬೃಹದಾಕಾರವಾದ ಗಾತ್ರಕ್ಕೆ ಹಿಗ್ಗಿಸಿದನು, ಇದನ್ನು ನೋಡಿದ ಸಿಂಹಿಕೆಯು ಸಾಕ್ಷಾತ್ ಪಾತಾಳವನ್ನೇ ಹೋಲಬಹುದಾದ ತನ್ನ ಬಾಯಿಯನ್ನು ಮತ್ತಷ್ಟು ವಿಶಾಲವಾಗಿ ಅಗಲಿಸಿದಳು, ಬೆಳೆಯುತ್ತಲೇ ಹನುಮದೇವನು ಆಕೆಯ ಬಾಯಿಯನ್ನು, ಆಕೆಯ ದೇಹದೊಳಗಿನ ಮರ್ಮಾಂಗವನ್ನು ಗಮನಿಸಿದನು. ಆಕೆಯ ಯಾವ ಮರ್ಮಾಂಗವನ್ನು ಘಾಸಿಗೊಳಿದರೆ ಆಕೆಯನ್ನು ಕೊಲ್ಲಬಹುದೆಂದು ಅರಿತ ಹನುಮಂತನು, ತಕ್ಷಣವೇ ತನ್ನ ಶರೀರವನ್ನು ಅತ್ಯಂತ ವೇಗವಾಗಿ ಕುಗ್ಗಿಸಿ, ಆಕೆಯ ಬಾಯಿಯೊಳಕ್ಕೆ ಬಿದ್ದನು ಹಾಗೂ ಅಷ್ಟೇ ವೇಗದಲ್ಲಿ ತನ್ನ ವಜ್ರನಖಗಳಿಂದ (ಚೂಪಾದ ಉಗುರು) ಆಕೆಯ ಮರ್ಮಾಂಗವನ್ನು ಕತ್ತರಿಸಿ ಅಷ್ಟೇ ವೇಗದಲ್ಲಿ ಸಿಂಹಿಕೆಯ ಬಾಯಿಯಿಂದ ಹೊರಬಂದನು. ಹಾಗೂ ಅಷ್ಟೇ ವೇಗದಲ್ಲಿ ತನ್ನ ಮೊದಲಿನ ಗಾತ್ರಕ್ಕೆ ಬೆಳೆದನು. ಹೀಗೆ ಅತ್ಯಂತ ಬುದ್ಧಿವಂತಿಕೆಯಿಂದ ಸಿಂಹಿಕೆಯೆಂಬ ಮಹಾನ್ ರಾಕ್ಷಸಿಯನ್ನು ಹತ್ಯೆಗೈದ ಹನುಮದೇವನ ಪರಾಕ್ರಮವನ್ನು ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ಜೀವಿಗಳೆಲ್ಲವೂ ಪ್ರಶಂಸಿಸಿದವು. ಆ ಜೀವಿಗಳು ಇನ್ನೂ ಮುಂದುವರಿದು " ನಿನ್ನಲ್ಲಿರುವ ಪರಾಕ್ರಮ ಧೈರ್ಯ ಸಾಹಸಗಳು ಹಾಗೂ ಬುದ್ಧಿವಂತಿಕೆಯನ್ನು ಹೊಂದಿರುವ ಯಾವ ವ್ಯಕ್ತಿಯೂ ತನ್ನ ಕಾರ್ಯದಲ್ಲಿ ಸೋಲಲು ಸಾಧ್ಯವಿಲ್ಲ" ಎಂದು ಕೊಂಡಾಡಿದವು. ಹೀಗೆ ನಡುದಾರಿಯಲ್ಲಿನ ಎದುರಾದ ಅಡೆತಡೆಗಳನ್ನು ನಿವಾರಿಸಿಕೊಂಡು ವಾಯುವೇಗದಲ್ಲಿ ಮುಂದುವರಿದ ಹನುಮಂತನು,  ತ್ವರಿತವಾಗಿಯೇ ನೂರು ಯೋಜನ ವಿಸ್ತೀರ್ಣದ ಸಮುದ್ರವನ್ನು ದಾಟಿದನು ಹಾಗೂ ಸಮುದ್ರದ ದಡದಲ್ಲಿಯೇ ಬೃಹದಾಕಾರವಾದ ಅರಣ್ಯವನ್ನು ಕಂಡು ಕೆಳಗಿಳಿದನು. ಅಲ್ಲಿ ವಿಭಿನ್ನ ರೀತಿಯ ಮರಗಳಿಂದಾವೃತವಾದ ದ್ವೀಪಸಮೂಹವನ್ನೂ, ಉಪವನಗಳನ್ನೂ ಕಂಡನು. ಹಾಗೆಯೇ ಅಲ್ಲಿನ ರಾಕ್ಷಸರು ತನ್ನ ದೈತ್ಯಾಕಾರದ ದೇಹವನ್ನು ವಿಚಿತ್ರವಾಗಿ ಹಾಗೂ ಕುತೂಹಲದಿಂದ ಗಮನಿಸುತ್ತಿರುವುದನ್ನು ಕಂಡ ಹನುಮಂತನು ಸಮಯೋಚಿತ ನಿರ್ಧಾರವನ್ನು ಕೈಗೊಂಡು ತನ್ನ ದೇಹದ ಗಾತ್ರವನ್ನು ಕುಗ್ಗಿಸಿ, ಮೊದಲಿನ ಗಾತ್ರಕ್ಕೆ ಬಂದನು. ಬಲಿಯನ್ನು ಮಟ್ಟಹಾಕಲೆಂದೇ ತನ್ನ ಶರೀರದ ಗಾತ್ರವನ್ನು ಹೆಚ್ಚಿಸಿದ ಶ್ರೀ ವಿಷ್ಣುವು ಬಲಿಯನ್ನು ಹತಗೊಳಿಸಿದ ನಂತರ ನಿಜರೂಪವನ್ನು ಪಡೆದಂತೆ ಹನುಮಂತನು ತನ್ನ ನಿಜರೂಪಕ್ಕೆ ಬಂದನು. ತನ್ನ ಸ್ವ ಇಚ್ಚಾರೂಪಧಾರಿಯಾದ ಹನುಮಂತನು ಅಲ್ಲಿನ ವಿವಿಧ ಶಿಖರ ಪ್ರದೇಶಗಳನ್ನು ಗಮನಿಸುತ್ತಾ, ಕೇದಗೆ ಹಾಗೂ ತೆಂಗಿನ ಮರಗಳುಳ್ಳ ಲಂಬವೆಂಬ ಶಿಖರದಲ್ಲಿ ಧುಮುಕಿದನು. ಮಹಾಸಾಗರವನ್ನು ಅತೀವ ಪರಾಕ್ರಮಗಳಿಂದ ಹಾರಿ ದಾಟಿದ ಮಾರುತಿಯು ವಿಶಾಲವಾದ ಪರ್ವತ ಶಿಖರಗಳು, ಅರಣ್ಯ ಹಾಗೂ ಸಮುದ್ರದ ತೀರದಲ್ಲಿದ್ದ ಲಂಕಾ ಸಾಮ್ರಾಜ್ಯವನ್ನು ಒಮ್ಮೆ ದೀರ್ಘವಾಗಿ ನೋಡಿದನು. 


ಇಲ್ಲಿಗೆ ಸುಂದರಕಾಂಡದಲ್ಲಿನ ಒಂದನೆಯ ಸರ್ಗವು ಮುಕ್ತಾಯವಾಯಿತು.
(Download as PDF)No comments: