ಸುಭಾಷಿತಗಳು

ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು
ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ
ನೀತಿನಿಪುಣರು ನಿಂದಿಸಲಿ ಹೊಗಳಲಿ, ಸಂಪತ್ತು ಬರಲಿ ಅಥವಾ ಹೊರಟುಹೋಗಲಿ, ಸಾವು ಈಗಲೇ ಬರಲಿ ಅಥವಾ ಯುಗಾಂತರದಲ್ಲಿ ಉಂಟಾಂಗಲಿ, ಧೀರರಾದವರು ನ್ಯಾಯಮಾರ್ಗವನ್ನು ಬಿಟ್ಟು ಸ್ವಲ್ಪವೂ ಕದಲುವದಿಲ್ಲ.
ನೈವ ಕಿಂಚಿತ್ಕರೋಮೀತಿ
ಯುಕ್ತೋ ಮನ್ಯೇತ ತತ್ತ್ವವಿತ್
ಪಶ್ಯನ್ ಶೃಣ್ವನ್ ಸ್ಪೃಶನ್  ಜಿಘ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್
ಪ್ರಲಪನ್ವಿಸೃಜನ್ ಗ್ರಹ್ಣನ್
ಉನ್ಮಿಷನ್ನಿಮಿಷನ್ನಪಿ
ಇಂದ್ರಿಯಾಣೀಂದ್ರಿಯಾರ್ಥೇಷು
ವರ್ತಂತ ಇತಿ ಧಾರಯನ್
ತತ್ತ್ವಜ್ಞಾನಿಯಾದ ಸಾಂಖ್ಯಯೋಗಿಯು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ಊಟ ಮಾಡುವಾಗ, ಓಡಾಡುವಾಗ, ನಿದ್ರಿಸುವಾಗ,ಉಸಿರಾಡುವಾಗ,ಮಾತನಾಡುವಾಗ,ತ್ಯಜಿಸುವಾಗ ಹಾಗೂ ಸ್ವೀಕರಿಸುವಾಗ,ಕಣ್ಣು ತಿಳಿಯುವಾಗ ಹಾಗೂ ಕಣ್ಣು ಮುಚ್ಚುವಾಗಲೂ ಸಹ ಇಂದ್ರಿಯಗಳೆಲ್ಲವೂ ತಮ್ಮ- ತಮ್ಮ ಸ್ವಾಭಾವಿಕ ವಿಷಯಗಳಲ್ಲಿ ಪ್ರವೃತ್ತವಾಗಿರುತ್ತವೆ ಎಂದು ತಿಳಿದುಕೊಳ್ಳುತ್ತಾ, ನಾನು ಏನನ್ನೂ ಸಹ ಮಾಡುತ್ತಾ ಇಲ್ಲ ಎಂದು ನಿಃಸಂದೇಹವಾಗಿ ತಿಳಿಯಬೇಕು
ತ್ಯಾಜ್ಯಂ ಧೈರ್ಯಂ ವಿದುರೇಪಿ ಕಾಲೇ
ಧೈರ್ಯಾತ್ಕದಾಚಿದ್ಗತಿಮಾಪ್ನುಯಾತ್ಸಃ
ಯಥಾ ಸಮುದ್ರೇಪಿ ಚ ಪೋತಭಂಗೇ
ಸಾಯಾಂತ್ರಿಕೋ ವಾಂಛತಿ ತರ್ತುಮೇವ
ಸಮುದ್ರದಲ್ಲಿ ಹಡಗು ಮುರಿದರೂ ನಾವಿಕನು ಸಾಗರವನ್ನು ದಾಟಲು ಹೇಗೆ ಬಯಸುವನೋ ಹಾಗೆ ಕಷ್ಟಕಾಲದಲ್ಲಿಯೂ ಧೈರ್ಯವನ್ನು ಎಂದೂ ಬಿಡಬಾರದು. ಧೈರ್ಯದಿಂದ ಎಂದಾದರೂ ಒಳ್ಳೆಯ ಗತಿಯನ್ನು ಹೊಂದಿಯಾನು.
ಯಃ ಪಠತಿ ಲಿಖತಿ ಪಷ್ಯತಿ
ಪರಿಪೃಚ್ಛತಿ ಪಂಡಿತಾನುಪಾಶ್ರಯತಿ
ತಸ್ಯ ದಿವಾಕರಕಿರಣೈಃ ನಲಿನೀದಲಮಿವ ವಿಕಾಸ್ಯತೇ ಬುದ್ಧಿಃ
ಯಾವನು ಓದಿ, ಬರೆದು, ನೋಡಿ, ಬಗೆಬಗೆಯಾಗಿ ಪ್ರಶ್ನೆಮಾಡಿ, ಪಂಡಿತರನ್ನು ಆಶ್ರಯಿಸುವನೋ ಅವನ ಬುದ್ಧಿಯು ಸೂರ್ಯಕಿರಣಗಳಿಂದ ತಾವರೆಯ ದಳ ಅರಳುವಂತೆ ವಿಕಾಸಗೊಳ್ಳುವುದು
ಸರ್ವಕರ್ಮಾಣಿ ಮನಸಾ
ಸಂನ್ಯಸ್ಯಾಸ್ತೇ ಸುಖಂ ವಶೀ
ನವದ್ವಾರೇ ಪುರೇ ದೇಹೀ
ನೈವ ಕುರ್ವನ್ನ ಕಾರಯನ್ 
ತನ್ನ ಅಂತಃಕರಣವನ್ನು ವಶದಲ್ಲಿಟ್ಟುಕೊಂಡು ಸಾಂಖ್ಯಯೋಗದ ಆಚರಣೆ ಮಾಡುವ ಪುರುಷನು ನಿಸ್ಸಂದೇಹವಾಗಿ ಏನನ್ನೂ ಮಾಡದೆ ಮತ್ತು ಏನನ್ನೂ ಮಾಡಿಸದೇ ಒಂಭತ್ತು ದ್ವಾರಗಳುಳ್ಳ ಶರೀರರೂಪೀ ಮನೆಯಲ್ಲಿ ಎಲ್ಲಾ ಕರ್ಮಗಳನ್ನೂ ಮನಸ್ಸಿನಿಂದಲೇ ತ್ಯಜಿಸಿ ಅರ್ಥಾತ್ ಇಂದ್ರಿಯಗಳು ಅವುಗಳ ವಿಷಯಗಳಲ್ಲಿ ಪ್ರವರ್ತಿಸುತ್ತಿವೆ ಎಂದು ತಿಳಿಸಿದುಕೊಳ್ಳುತ್ತಾ ಆನಂದವಾಗಿ ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಸ್ಥಿರಗೊಂಡಿರುತ್ತಾನೆ
ಯುಕ್ತಂ ಕರ್ಮಫಲಂ ತ್ಯಕ್ತ್ವಾ
ಶಾಂತಿಮಾಪ್ನೋತಿ ನೈಷ್ಠಿಕೀಮ್
ಅಯುಕ್ತಃ ಕಾಮಕಾರೇಣ
ಫಲೇ ಸಕ್ತೋ ನಿಬಧ್ಯತೇ
ನಿಷ್ಕಾಮ ಕರ್ಮಯೋಗಿಯು ಕರ್ಮಗಳ ಫಲವನ್ನು ತ್ಯಾಗ ಮಾಡಿ ಅರ್ಥಾತ್ ಪರಮಾತ್ಮನಿಗೆ ಸಮರ್ಪಿಸಿ ಭಗವತ್ಸಾಕ್ಷಾತ್ಕಾರ ರೂಪೀ ಶಾಂತಿಯನ್ನು ಪಡೆಯುತ್ತಾನೆ ಮತ್ತು ಸಕಾಮೀ ಪುರುಷನು ಫಲದಲ್ಲಿ ಆಸಕ್ತನಾಗಿ ಕಾಮಪ್ರೇರಣೆಯಿಂದ ಬಂಧಿಸಲ್ಪಡುತ್ತಾನೆ
ಶ್ರದ್ಧಯಾ ಧಾರ್ಯತೇ ಧರ್ಮೋ
ಬಹುಭಿರ್ನಾರ್ಥರಾಶಿಭಿಃ
ನಿಷ್ಕಿಂಚನಾ ಹಿ ಮುನಯಃ
ಶ್ರದ್ಧಾವಂತೋ ದಿವಂಗತಾಃ
ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಹೇರಳವಾದ ಹಣವಿದ್ದರೂ ಧರ್ಮವನ್ನು ಸಂಪಾದಿಸಲಾಗದು. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ. ( ಗರುಡಪುರಾಣ)
ಯಃ ಸರ್ವತ್ರಾನಭಿಸ್ನೇಹಃ
ತತ್ತತ್ ಪ್ರಾಪ್ಯ ಶುಭಾಶುಭಮ್
ನಾಭಿನಂದತಿ ನ ದ್ವೇಷ್ಟಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ 
" ಯಾರು ಎಲ್ಲ ವಸ್ತುಗಳಲ್ಲಿಯೂ ಆಸಕ್ತಿ ರಹಿತನಾಗಿ ಇದ್ದು, ಬಂದ ಶುಭ ಫಲಗಳಿಗೆ ಸಂತೋಷಪಡದೇ, ಅಶುಭ ಫಲಗಳಿಗೆ ದುಃಖ - ದ್ವೇಷ ಪಡದೇ ಇರುತ್ತಾನೋ ಅವನೇ ಸ್ಥಿತಪ್ರಜ್ಞನು."  ಹೀಗೆ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಸ್ಥಿತಪ್ರಜ್ಞನ ಸ್ವಭಾವದ ಪರಿಚಯ ಮಾಡಿಕೊಡುತ್ತಾನೆ.  ಸುಖ ಬಂದಾಗ ಹಿಗ್ಗುವುದಿಲ್ಲ. ದುಃಖವಾದಾಗ ಕುಗ್ಗುವುದಿಲ್ಲ.  ಹೀಗೆ ಸಮತ್ವ ಬುದ್ಧಿಯಲ್ಲಿ ಇರುವವನು ಸ್ಥಿತಪ್ರಜ್ಞ ಎನಿಸಿಕೊಳ್ಳುತ್ತಾನೆ.  ಅವನಿಗೆ ಲಾಭದ ಮೇಲೆ ಆಸಕ್ತಿ ಇರುವುದಿಲ್ಲ. ಹಾಗೆಯೇ ನಷ್ಟದ ಬಗ್ಗೆ ದುಃಖವೂ ಇರುವುದಿಲ್ಲ.  ಅವನನ್ನೇ ಯೋಗಿ ಅಥವಾ ಯೋಗಸ್ಥ ಮನಸ್ಸಿನವನು ಎನ್ನುತ್ತಾರೆ. ಹೀಗೆ ಸ್ಥಿತಪ್ರಜ್ಞನಾಗಿದ್ದರೆ ಮಾನಸಿಕ ನೆಮ್ಮದಿ ಮತ್ತು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಆಸಕ್ತಿ, ತೃಪ್ತಿ ಇರುತ್ತದೆ.  ಅದರಿಂದ ಆನಂದ ಸಿಗುತ್ತದೆ. ಚಿಂತೆ ಮತ್ತು ಮಾನಸಿಕ ಕ್ಲೇಶ - ತೊಳಲಾಟ ಇರುವುದಿಲ್ಲ.  ನಾವೂ ಸಹ ಹೀಗೆ ಸ್ಥಿತಪ್ರಜ್ಞರಾಗಲು ಪ್ರಯತ್ನಿಸೋಣ.  ಜೀವನದಲ್ಲಿ  ಆನಂದ ಮತ್ತು ನೆಮ್ಮದಿ ಪಡೆಯೋಣ.  
ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು
ಮುಂದೆ ತಾನೇಳುವುದು ಬೇರೆ ಗಾತ್ರದಲಿ
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹುದು ಬೆರಗೊಂದೆ - ಮಂಕುತಿಮ್ಮ 
ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ.
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ
ತಿಳಿವುಮೊಳ್ತನಮುಂ ವಿರಕ್ತಿಯಂ ಮುಕ್ತಿಯುಂ
ಗಳಿಗೆ ಸರಿಸೇರ್ದಂದು ಮಂಕುತಿಮ್ಮ
ಮಳೆ, ಬೆಳೆ ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ಕಾಲ ಋತುಗಳಿರುವಂತೆಯೇ ತಿಳುವಳಿಕೆ, ಸಜ್ಜನಿಕೆ, ವಿರಕ್ತಿ ಮತ್ತು ಮೋಕ್ಷಗಳಿಗೂ ಸಹ ಆಯಾ ಸಮಯದಲ್ಲಿ ಒದಗುತ್ತದೆ.ಈ ರೀತಿ ಜೀವ ಎಂಬ ಮರವನ್ನು ಕಾಲನಿಯಮವು ಬೆಳೆಸುತ್ತದೆ
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?
ತಾಳುಮೆಯ ಪರಿಪಾಕ ಮಂಕುತಿಮ್ಮ
ಬೆಳಿಗ್ಗೆ ಕಾಳುಬಿತ್ತಿ ಸಂಜೆಗಾಗಲೇ ಅದು ಬೆಳೆದು ಪೈರಾಗಲೆಂದು ಬಯಸಿದರೆ ಅದು ಸಾಧ್ಯವೇ? ಅಗತ್ಯವಿರುವಷ್ಟು ಸಮಯ ಅಕ್ಕಿಯನ್ನು ಬೇಯಿಸದೇ ಹೋದಲ್ಲಿ ಅನ್ನವಾಗುವುದಿಲ್ಲ, ಆದುದರಿಂದ ತಾಳೆ ಎಂಬುದು ಜೀವನದಲ್ಲಿ ಬಹಳ ಮುಖ್ಯ, ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ ಕಾಲನೇ ಮುಖ್ಯ ಕಾರಣ, ಆದುದರಿಂದ ಪ್ರತಿಯೊಂದಕ್ಕೂ ತಾಳ್ಮೆಯಿಂದ ಕಾಯುವುದು ಅತ್ಯಂತ ಅಗತ್ಯ.
ಸಾಮಾನ್ಯರೂಪದಲಿ, ಸಂಸಾರಿ ವೇಷದಲಿ
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು
ತಾಮಸಿಗೆ ವರವೆಲ್ಲಿ? ಮಂಕುತಿಮ್ಮ
ಭಗವಂತನು ನಿನ್ನ ಬಳಿಗೆ ಯಾವುದೇ ರೂಪದಲ್ಲಿಯಾದರೂ ಬರಬಹುದು (ಸಾಮಾನ್ಯನ ರೂಪದಲ್ಲಿ, ಸಂಸಾರಿಯ ರೂಪದಲ್ಲಿ ಹೀಗೆ). ವರ ನೀಡಬಹುದು. ಆದರೆ ಅವನ ಇರುವಿಕೆಯನ್ನು, ಅವನ ಮಹಿಮೆಯನ್ನು ಗುರುತಿಸಬೇಕಿದ್ದರೆ ನಿನ್ನಲ್ಲಿ ಸಂಸ್ಕಾರವಿರಬೇಕು, ತಾಮಸ ಮನೋಸ್ಥಿತಿಯನ್ನು ಹೊಂದಿದ್ದರೆ ಭಗವಂತನು ನಿನ್ನ ಪಕ್ಕದಲ್ಲಿಯೇ ಇದ್ದರೂ ಗುರುತಿಸಲಾಗದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ
ಹೊರಗೆ ಕಾರ್ಯಧ್ಯಾನವೊಳಗುದಾಸೀನ
ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ
ವರಯೋಗಮಾರ್ಗವಿದು ಮಂಕುತಿಮ್ಮ
ಜೀವನದಲ್ಲಿ ನೋವು ರಹಿತವಾಗಿ ಜೀವನ ನಡೆಸಬೇಕಾದಲ್ಲಿ ನಾವು ಹೊರಜಗತ್ತಿನೊಂದಿಗೆ ವ್ಯವಹಾರದಲ್ಲಿ ನಿರತರಾಗಿದ್ದರೂ ಅದರ ಕುರಿತು ಮನಸ್ಸಿನಲ್ಲಿ ವಿರಕ್ತಿಭಾವವನ್ನು ಹೊಂದಿರಬೇಕು, ಸಂಸಾರ, ಹುಟ್ಟು, ಸಾವು ಎಲ್ಲ ಸಂಸ್ಕೃತಿ, ಸಂಪ್ರದಾಯಗಳ ಭಾರವನ್ನು ಹೊತ್ತರೂ  ಮನಸ್ಸಿನಲ್ಲಿ ಅವುಗಳ ಬಗ್ಗೆ ತಿರಸ್ಕಾರ, ಉದಾಸೀನತೆಯ ಮನೋಭಾವವನ್ನು ಹೊಂದಿರಬೇಕು, ಜ್ಞಾನಿಯೆನಿಸಿದವನು ಮಾತ್ರವೇ ಈ ಹಾದಿಯನ್ನು ಅನುಸರಿಸುತ್ತಾನೆ.
ಪ್ರಸಾದಾದೇವ ಸಾ ಭಕ್ತಿ: ಪ್ರಸಾದೋ ಭಕ್ತಿಸಂಭವ:
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರ:
ಅಂಕುರದಿಂದ ಬೀಜ ಬೀಜದಿಂದ ಅಂಕುರವು ಹೇಗೆ ಉತ್ಪನ್ನವಾಗುತ್ತದೆಯೋ ಹಾಗೆಯೇ ಶಿವನ ಪ್ರಸಾದದಿಂದ ಭಕ್ತಿ, ಭಕ್ತಿಯಿಂದ ಶಿವನ ಪ್ರಸಾದ ಉಂಟಾಗುತ್ತದೆ. ಶಿವಾನುಗ್ರಹವಿಲ್ಲದೇ ಭಕ್ತಿಯು ಮೂಡದು, ಶಿವಭಕ್ತಿರಹಿತನಿಗೆ ಶಿವಾನುಗ್ರಹವಾಗದು, ಶಿವಾನುಗ್ರಹವೆಂಬುದು ಶಿವನ ಕೈಯಲ್ಲಿದೆ, ಶಿವಭಕ್ತಿಯು ನಮ್ಮ ಕೈಯಲ್ಲಿರುತ್ತದೆ. ಆದುದರಿಂದ ನಮ್ಮ ಮನದಲ್ಲಿ ಭಕ್ತಿಯನ್ನು ಅಳವಡಿಸಿಕೊಂಡು ಶಿವನ ಅನುಗ್ರಹವನ್ನು ಪಡೆಯಬೇಕು. 
ಯಥಾವೃಷ್ಟಿ: ಸಮುದ್ರೇಷು ವೃಥಾತೃಪ್ತಸ್ಯ ಭೋಜನಂವೃಥಾದಾನಂ ಸಮರ್ಥಸ್ಯ ವೃಥದೀಪೋ ಈ ದಿವಾ ಚ
ಸಮುದ್ರದಲ್ಲಿ ಸುರಿಯುವ ಮಳೆ, ತೃಪ್ತನಾದ ವ್ಯಕ್ತಿಗೆ ಇಡುವ ಭೋಜನ, ಶಕ್ತರಿಗೆ ನೀಡುವ ದಾನ, ಉತ್ತಮ ಬೆಳಕಿರುವ ಹಗಲಿನಲ್ಲಿ ಉರಿಯುವ ದೀಪ ಇವೆಲ್ಲವೂ ಸಂಪೂರ್ಣ ವ್ಯರ್ಥವಾದವುಗಳಾಗಿವೆ.
ಆದರೇಣ ಯಥಾಸ್ತೌತಿ ಧನವಂತಂ ಧನೇಚ್ಛಯಾತಥಾಚೇತ್ಪರಮಾತ್ಮಾನಂ ಕೋನಮುಚ್ಯೇತ ಬಂಧನಾತ್
ಸಿರಿವಂತನ ಬಳಿ ಸಾಲ ಪಡೆಯಲು ನಾವು ಎಷ್ಟೆಲ್ಲಾ ವಿನಯದಿಂದ, ಆದರಾಭಿಮಾನದಿಂದ ಸ್ತುತಿ ಮಾಡುತ್ತೇವೆಯೋ, ಅದೇ ರೀತಿ ಪರಮಾತ್ಮನನ್ನು ಸ್ತುತಿ ಮಾಡಿದರೆ ಯಾರು ತಾನೇ ತಮ್ಮ ಬಂಧನಗಳಿಂದ ಮುಕ್ತನಾಗಲಾರೆವು.
ಪ್ರಾರಬ್ಧವೇ ನಿರುದ್ಯೋಗ: ಜಾಗರ್ತವ್ಯೇ ಪ್ರಸುಪ್ತಕ:
ವಿಶ್ವಸ್ತವ್ಯೇ ಭಯಸ್ಥಾನೇ ಹಾ ನರ: ಕೋ ನ ಹನ್ಯತೇ
ಅತ್ಯಂತ ಅಗತ್ಯವಾಅಗಿ ಕಾರ್ಯಾರಂಭ ಮಾಡಲೇಬೇಕಾದ ಪರಿಸ್ಥಿತಿ ಇದ್ದಾಗ್ಯೂ ಸಹ ಮನುಷ್ಯನಾದವನು ಸೋಮಾರಿಯಾಗಿ ಕುಳಿತುಕೊಳ್ಳುತ್ತಾನೆ. ಅವನು ಮಾಡುವ ದೊಡ್ಡ ತಪ್ಪೆಂದರೆ ಕೇವಲ ಕೆಲಸವಾರಂಭಿಸುವ ವಿಷಯದ ಕುರಿತಾದ ಭಯವನ್ನುಂಟು ಮಾಡುವ ವಿಷಯಗಳ ಕುರಿತೇ ಅತಿಯಾದ ವಿಶ್ವಾಸವಿಡುತ್ತಾನೆ. ಆದರೆ ಅವನು ಇದನ್ನು ಶಾಶ್ವತ ಎಂದು ಭಾವಿಸದೆಯೇ ಯಶಸ್ಸಿನ ರಹಸ್ಯವನ್ನರಿತು ಮುಂದುವರಿಯಬೇಕು, ಇಲ್ಲವಾದರೆ ಅವನ ನಾಶ ಖಂಡಿತ.
ಜನ್ಮನಾ ಜಾಯತೇ ಶೂದ್ರ: ಕರ್ಮಣಾ ಜಾಯತೇ ದ್ವಿಜ:
ವಿದ್ಯಯಾ  ಯಾತಿ ವಿಪ್ರತ್ವಂ ತ್ರಿಭಿ: ಶ್ರೋತ್ರೀಯ ಉಚ್ಯತೇ
ಹುಟ್ಟಿನಿಂದ ಶೂದ್ರನಾದರೂ ಸಂಧ್ಯಾವಂದನೆ, ದೇವಪೂಜೆ ಇತ್ಯಾದಿಗಳಿಂದ ದ್ವಿಜನೆನಿಸಬಹುದು. ವೇದವಿದ್ಯೆಯಿಂದ  ವಿಪ್ರತ್ವ ಪಡೆದಿದ್ದರೂ ಈ ಮೂರೂ ಗುಣವುಳ್ಳವನು ಶ್ರೋತ್ರಿಯೆನಿಸಿಕೊಳ್ಳುತ್ತಾನೆ.
ದೈವತ್ವ ಕಾಣುವುದು ಯಾವಾಗ
ನಾವೆಲ್ಲರೂ ಪ್ರಾಪಂಚಿಕ ಸುಖ ಭೋಗಗಳಲ್ಲಿ ದ್ವೇಷ, ಅಸೂಯೆ ನಾನು ಎಂಬ ಅಹಂನಲ್ಲಿ ಮುಳುಗಿ ಹೋಗಿದ್ದೇವೆ. ನಮ್ಮ ನಮ್ಮಲ್ಲಿಯೇ ಹೊಂದಾಣಿಕೆ ಇಲ್ಲದ ಬದುಕನ್ನು ಸೃಷ್ಟಿಸಿಕೊಂಡಿದ್ದೇವೆ. ಹಲವಾರು ಜಾತಿ, ಧರ್ಮಗಳ ಪದ್ಧತಿಗಳ ಗೋಡೆಗಳನ್ನು ಕಟ್ಟಿಕೊಂಡು ನಮ್ಮನ್ನು ನಾವು ಬಂಧಿಸಿಕೊಂಡಿದ್ದೇವೆ. ಆದರೆ ಮಗುವೊಂದನ್ನು ಗಮನಿಸಿ, ಅದಕ್ಕೆ ತಾನ್ಯಾರೆಂಬುದೇ ತಿಳಿದಿರುವುದಿಲ್ಲ. ಇವರು ನಮ್ಮವರು, ಇವರು ನಮ್ಮವರಲ್ಲ ಎಂಬ ಬೇಧ ಭಾಅವಗಳಿರುವುದಿಲ್ಲ. ಸಾಂದರ್ಭಿಕವಾಗಿ ಅತ್ತರೂ, ಕೋಪಿಸಿಕೊಂಡರೂ ಸಹ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಮರೆತು ಎಲ್ಲರೊಂದಿಗೆ ಬೆರೆತು ನಗುತ್ತಿರುತ್ತದೆ. ಯಾವುದೇ ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತದೆ, ಆಡಿ ನಲಿಯುತ್ತದೆ. ಹೀಗೆ ನಮ್ಮ ಅಜ್ಞಾನ, ಅಹಂಕಾರದಿಂದ ಸೃಷ್ಟಿಸಿಕೊಂಡ ಎಲ್ಲ ಬಂಧನಗಳನ್ನೂ ದಾಟಿ ನಮ್ಮ ಮನಸ್ಸು ಮಗುವಿನಂತೆ ನಲಿದಾಡಿ ಬಂದದ್ದೆಲ್ಲವನ್ನೂ ಸಂತಸದಿಂದ ಸ್ವೀಕರಿಸಿದಲ್ಲಿ ಆಗ ಮಾತ್ರ ನಾವು ನಿಜವಾದ ದೈವತ್ವವನ್ನು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಕಾಣಬಹುದು. ಹೀಗೆ ಆಗಬೇಕಾದಲ್ಲಿ ಇರುವುದೊಂದೇ ದಾರಿ ಮೊದಲು ನಾವು ಮಗುವಾಗಬೇಕು. ನಿಷ್ಕಲ್ಪಷವಾದ ಮನಸ್ಸು ನಮ್ಮದಾಗಬೇಕು.
ನಾಳೆ ಎನ್ನುವುದು ಶಾಶ್ವತ, ಖಂಡಿತ ನಾಳೆ ಎಂಬುದು ಬಂದೇ ಬರುತ್ತದೆ. ಆದರೆ ಆ ನಾಳೆಯನ್ನು ನೋಡಲು ನಾವಿರುತ್ತೇವೆಯೇ? ಈ ಪ್ರಶ್ನೆಗೆ ಉತ್ತರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ನಮ್ಮದಾಗಿರುವ ಈ ದಿನವನ್ನು ಮಗುವಿನಂತಹ ಮನಸ್ಸಿನಿಂದ ಅರ್ಥಪೂರ್ಣವಾಗಿ ಜೀವಿಸಬೇಕು.
ಪಾರದರ್ಶಕತೆ ಮತ್ತು ನಿರ್ಭೀತ ಸ್ಥಿತಿ
ಜೀವನದಲ್ಲಿ ಎಂದಿಗೂ ಪಾರದರ್ಶಕತೆ ಅತ್ಯಂತ ಅವಶ್ಯಕ. ಯಾವುದೇ ಮುಚ್ಚುಮರೆಯಿಲ್ಲದ ಜೀವನದಿಂದ ಮನಸ್ಸು ನಿರ್ಭೀತವಾಗಿರುತ್ತದೆ. ಸುಳ್ಳು ಹೇಳುವ ಅನಿವಾರ್ಯತೆ ಇರುವುದಿಲ್ಲ. ಸುಳ್ಳು ಹೇಳದೇ ಇರುವುದರಿಂದ ಅತಿಯಾದ ನೆನಪಿನ ಶಕ್ತಿಯ ಅವಶ್ಯಕತೆಯೂ ಇರುವುದಿಲ್ಲ. ಪಾರದರ್ಶಕತೆಯಿಂದ ಜೀವನ, ಮನಸ್ಸು ಹಗುರಾಗುತ್ತದೆ. ಅಸತ್ಯದ ಬೇಲಿಯಿಂದ ಉಂಟಾಗಬಹುದಾದ ತೊಳಲಾಟಗಳು, ಭಯ ಇಲ್ಲವಾಗಿ ನೆಮ್ಮದಿ ಮನೆ ಮಾಡುತ್ತದೆ. ನಮಗೆ ಸರಿಯೆನಿಸಿದ್ದನ್ನು ಹೇಳಿದಾಗ ಇತರರಿಗೆ ನೋವಾಗುತ್ತದೆಂದು ಪ್ರಿಯವಾದ ಸುಳ್ಳು ಹೇಳಿದರೆ ಒಂದಕ್ಕೆ ಒಂದರಂತೆ ಸುಳ್ಳಿನ ಸರಪಳಿಯಿಂದ ನಮ್ಮ ಉಸಿರು ಬಿಗಿದು ಜೀವನ ದುರ್ಭರವಾಗುತ್ತದೆ.
ನಿಜವಾದ ಆರೋಗ್ಯನಮ್ಮಲ್ಲಿನ ಆರು ಇಂದ್ರಿಯಗಳೂ ಆರೋಗ್ಯವಾಗಿರುವುದೇ ನಿರ್ಮಲವಾಗಿರುವುದೇ ಆರೋಗ್ಯ. ಅರೆ ಇರುವುದು ಐದೇ ಇಂದ್ರಿಯಗಳಲ್ಲವೇ? ಎಂದು ನಿಮಗನ್ನಿಸಬಹುದು, ಹೌದು ಕಿವಿ, ಚರ್ಮ, ಕಣ್ಣು, ನಾಲಗೆ ಹಾಗೂ ಮೂಗು ಈ ಐದು ಪಂಚೇಂದ್ರಿಯಗಳಾದರೆ ಕಣ್ಣಿಗೆ ಕಾಣದ ಹಾಗೂ ಅತ್ಯಂತ ಮಹತ್ವವಾದ ಮನಸ್ಸು ನಮ್ಮ ಆರನೆಯ ಇಂದ್ರಿಯವಾಗಿದೆ. ನಮ್ಮ ಈ ಆರೂ ಇಂದ್ರಿಯಗಳೂ ಪರಿಶುದ್ಧವಾಗಿದ್ದಲ್ಲಿ ಮಾತ್ರ ನಮ್ಮ ಜೀವನದಲ್ಲಿನ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಲಭಿಸಲು ಸಾಧ್ಯ. ನಮ್ಮ ಈ ಆರು ಇಂದ್ರಿಯಗಳಲ್ಲಿ ಯಾವುದೇ ಒಂದು ಇಂದ್ರಿಯಕ್ಕೆ ಸಮಸ್ಯೆಯಾದರೂ ಆರೋಗ್ಯ ಇರುವುದಿಲ್ಲ.
ನಿಜವಾದ ಗೆಲುವು 
ಘನಘೋರ ಯುದ್ಧಗಳನ್ನು ಮಾಡಿ ಹಲವಾರು ಜನರನ್ನು ಸೋಲಿಸಿ, ರಾಜ್ಯಗಳನ್ನು ಗೆದ್ದರೂ, ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಅವನು ಜೀವನದಲ್ಲಿ ಗೆಲ್ಲಲಾರ, ಗೆದ್ದ ಗೆಲುವನ್ನು ಗೆಲುವಿನ ಫಲವನ್ನು ಉಳಿಸಿಕೊಳ್ಳಲಾರ. ಎಂಥಹ ಕಠಿಣ ಪರಿಸ್ಥಿತಿಯಲ್ಲಿಯೂ, ಎಂಥಹ ಸಂತಸದ ಸನ್ನಿವೇಶದಲ್ಲಿಯೂ ತನ್ನ ಮನಸ್ಸನ್ನು ತಾನು ನಿಯಂತ್ರಿಸಿದಲ್ಲಿ ಜೀವನದಲ್ಲಿ ಅಂತಹ ವ್ಯಕ್ತಿ ಬಹುಪಾಲು ಗೆದ್ದಂತೆಯೇ ಸರಿ ಆದುದರಿಂದಲೇ ಭಗವಾನ್ ಗೌತಮ ಬುದ್ಧ ಹೀಗೆ ಹೇಳಿದ್ದಾರೆ. "ನೀನು 1000 ಯುದ್ಧಗಳನ್ನು ಮಾಡಿ ಲಕ್ಷಾಂತರ ಜನರನ್ನು ಗೆಲ್ಲಬಹುದು, ಆದರೆ ನಿನ್ನನ್ನು ನೀನು ಗೆಲ್ಲದ ಹೊರತು ಉಳಿದೆಲ್ಲಾ ಗೆಲುವುಗಳೂ ನಿರರ್ಥಕ"
ಆನಂದಮಯವಾದ ಬದುಕು
ಏನಿದು ಆನಂದಮಯವಾದ ಬದುಕು? ಬದುಕಿನಲ್ಲಿ ನಮಗೆ ದೊರೆಯುವುದು ಯಾವಾಗ? ಯಾವುದರಿಂದ ಅಂತಹ ಬದುಕು ನಮಗೆ ದೊರೆಯುತ್ತದೆ? ಬಹುಶ: ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದು ಲೌಕಿಕ ಬದುಕಿನ ಬಂಧನಗಳಿಗೆ ಸಿಲುಕಿದವರಿಗೆ ಅತ್ಯಂತ ಕಷ್ಟಕರ. ನೇರವಾಗಿ ಹೇಳುವುದಾದರೆ ನಮ್ಮ ಮನಸ್ಸಿನಲ್ಲಿ ಎಂದು ಶಾಂತಿ, ಸಮಾಧಾನಗಳು ನೆಲೆಸುತ್ತವೆಯೋ? ಯಾವಾಗ ನಮ್ಮ ಮನಸ್ಸು ಲಭ್ಯವಿರುವುದಕ್ಕೆ ತೃಪ್ತಿ ಪಡುತ್ತದೆಯೋ? ಯಾವಾಗ ದ್ವೇಷ-ಅಸೂಯೆಗಳನ್ನು ಮರೆತು ಶತೃಗಳನ್ನೂ ಸಹ ಕ್ಷಮಿಸಿ ಪ್ರೀತಿಸುವ ಗುಣ ಬೆಳೆಸಿಕೊಳ್ಳುತ್ತೇವೆಯೋ? ಎಂದು ಇತರರ ಕಷ್ಟ-ನೋವುಗಳಿಗೆ ಮಿಡಿಯುವ ಮಾನವೀಯ ಹೃದಯ ನಮ್ಮದಾಗುತ್ತದೆಯೋ? ಯಾವಾಗ ನಾನು ಎಂಬ ಅಹಂ ನಮ್ಮಿಂದ ದೂರವಾಗುತ್ತದೆಯೋ? ಯಾವಾಗ ನಮ್ಮ ಮನಸ್ಸುಗಳು ಮಗುವಿನ ಮನಸ್ಥಿತಿಗೆ ಮರಳುತ್ತವೆಯೋ? ಆಗ ನೋಡಿ ನಮ್ಮ ಜೀವನದಲ್ಲಿ ನಿಜವಾದ ಆನಂದ ಸಂತೋಷ ನಮಗೆ ಲಭಿಸುತ್ತದೆ.
ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ
ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ 
  
ಬಡವನಾದರೂ, ಕೇವಲ ನಾರುಮಡಿ ಧಿರಿಸುಗಳನ್ನು ಧರಿಸಿದರೂಹ ಅತ್ಯುತ್ತಮ ಬಟ್ಟೆಗಳನ್ನು ಉಡುವ ನಿಮಗಿರುವಷ್ಟೇ ತೃಪ್ತಿ ನಮಗಿದೆ, ಆಕೆಂದರೆ ಆಸೆ ಯಾವಾಗ ಹೆಚ್ಚುತ್ತದೆಯೋ ಆಗ ಮಾತ್ರ ನಮಗೆ ನಾವು ಬಡವ ಎಂದೆನಿಸುತ್ತದೆ. ಒಂದೊಮ್ಮೆ ಆಸೆ ಇಲ್ಲದೆಯೇ ಹೋದಲ್ಲಿ ಆಗ ಬಡವ-ಶ್ರೀಮಂತರೆಂಬ ಯಾವುದೇ ಬೇಧಭಾವಗಳೇ ಇರುವುದಿಲ್ಲ.
ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ
ನಿನ್ನಲ್ಲಿರುವ ಹಣವನ್ನು ಯಾರಿಗಾದರೂ ಸದುದ್ದೇಶಕ್ಕಾಗಿ ನೀಡು, ಇಲ್ಲವೇ ನೀನೇ ಏತಕ್ಕಾದರೂ ಬಳಸು,ಅದನ್ನು ಹೊರತುಪಡಿಸಿ ಕೂಡಿಡಬೇಡ, ಯಾರಿಗೂ ಉಪಯೋಗಕ್ಕೆ ಬಾರದೇ ಸುಮ್ಮನೇ ಕೂಡಿಟ್ಟ  ಹಣವು ಜೇನುಹುಳುಗಳು ಕೂಡಿಟ್ಟ ಜೇನು ಮತ್ತ್ಯಾರದೋ ಪಾಲಾಗುವಂತಾಗುವುದು.
ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? 
ಕಣ್ಣೆದುರಿನಲ್ಲಿಯೇ ಇರುವಾಯಿ, ತಂದೆ ಹಾಗೂ ಗುರುಗಳನ್ನು ಬಿಟ್ಟು ಕೈಗೆಂದೂ ನಿಲುಕದ, ಎಟುಕದ ದೇವರುಗಳನ್ನು ಏತಕ್ಕಾಗಿ ನೆಚ್ಚಿಕೊಳ್ಳುವೆ ಅಂದರೆ ಇಲ್ಲಿ ಕಣ್ಣಿಗೆ ಕಾಣುವ ದೇವರುಗಳನ್ನೇ ಗೌರವಿಸದವನು, ಅವರಲ್ಲಿ ದೇವರಲ್ಲಿ ಕಾಣದವನು, ಬೇರ್ಯಾವ ದೇವರುಗಳನ್ನು ತಾನೇ ನೋಡಲು ಸಾಧ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ.
ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ 
ಚೇಳಿಗೆ ಕೇವಲ ತನ್ನ ಬಾಲದ ತುದಿಯಲ್ಲಿ ಮಾತ್ರವೇವಿಷವಿರುತ್ತದೆ, ನೊಣಕ್ಕೆ ಬಾಯಿಯಲ್ಲ್ಲಿ ಮಾತ್ರವೇ ವಿಷವಿರುತ್ತದೆ, ಇನ್ನು ಹಾವಿಗೆ ತನ್ನ ಹಲ್ಲಿನಲ್ಲಿ ಮಾತ್ರವೇ ವಿಷವಿರುತ್ತದೆ, ಆದರೆ ಇಡೀ ಮೈಯೆಲ್ಲ ವಿಷವನ್ನು ಹೊಂದಿರುವಿಷಕಾರಿ ಪ್ರಾಣಿ ಎಂದರೆ ದುರ್ಜನನಾದ ಮನುಷ್ಯ ಮಾತ್ರವೇ ಆಗಿದೆ.
ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇಭ್ಯಾಸಯುಕ್ತಾ
ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ 
ಕಳೆದುಕೊಂಡ ಎಲ್ಲಾ ಸಂಪತ್ತನ್ನು ಮರಳಿ ಗಳಿಸಬಹುದು. ಮರೆತುಹೋದ ವಿದ್ಯೆಯನ್ನು ಸತತ ಪರಿಶ್ರಮಯುತ ಅಧ್ಯಯನದಿಂದ ಮತ್ತೆ ಪಡೆಯಬಹುದು. ಆರೋಗ್ಯದಲ್ಲಿನ ಏರುಪೇರುಗಳನ್ನು ವೈದ್ಯರ ಮುಖೇನ ಗುಣಪಡಿಸಿಕೊಳ್ಳಬಹುದು. ಆದರೆ, ಮಂದಬುದ್ದಿಯಿಂದ ಆಲಸ್ಯತನದಿಂದ  ಕಳೆದುಕೊಂಡ ಕಾಲವನ್ನು ಎಂದಿಗೂ ಸಹ ಮರಳಿಪಡೆಯಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ ಒಡೆದ ಮುತ್ತನ್ನು ಹಾಗೂ ಮಿಂಚಿಹೋದ ಕಾಲವನ್ನು ಎಂದಿಗೂ ಮರಳಿ ಸಾಧ್ಯವಿಲ್ಲ. ಜೀವನದ ಮಹಾ ಪಯಣದ ಹಾದಿಯಲ್ಲಿ ಇರುವ ಅಲ್ಪ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ಸದುಪಯೋಗಪಡಿಸಿಕೊಳ್ಳುವುದು ಜಾಣತನ.
ವಿರೂಪೋ ಯಾವದಾದರ್ಶೇ ನಾತ್ಮನ: ಪಶ್ಯತೇ ಮುಖಂ
ಮನ್ಯತೇ ತಾವದಾತ್ಮಾನಮನ್ಯೇಭ್ಯೋ ರೂಪವತ್ತರಂ
ಎಂಥಹ ವಿಕಾರ ಮುಖವುಳ್ಳವನೂ ಸಹ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವವರೆಗೂ ಎಲ್ಲರಿಗಿಂತಲೂ ತಾನೇ ರೂಪವಂತನೆಂಬ ಭ್ರಮೆಯಲ್ಲಿರುತ್ತಾನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ದೇಹ ಅಥವಾ ಮುಖದ ಸೌಂದರ್ಯದ ಕುರಿತಲ್ಲ. ನಮ್ಮ ಒಳ-ಹೊರಗುಗಳು, ಆಳ-ಅಗಲಗಳನ್ನು ಹಾಗೂ ಈ ಹಿಂದಿನ ನಮ್ಮ ಜೀವನವನ್ನು ನೋಡಿ ಅರಿತುಕೊಳ್ಳುವವರೆಗೂ ಮನುಷ್ಯನಲ್ಲಿನ ನಾನು ಎಂಬ ಅಹಂಕಾರವನ್ನು ತೊರೆದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ, ಎಂದಿಗೂ ಸಹ ನಾವು ನಡೆದುಬಂದ ಹಾದಿಯನ್ನು ಮರೆಯಬಾರದು, ಹತ್ತಿದ ಏಣಿಯನ್ನು ಒದೆಯಬಾರದೆಂದು
ಸಹವಾಸದ ಪ್ರಭಾವ
ಕಾದಿರುವ ಹೆಂಚಿನ ಮೇಲೆ ನೀರಿನ ಹನಿ ಬಿದ್ದರೆ ಅದು ಶಾಖಕ್ಕೆ ಖಾದು ಆವಿಯಾಗಿ ತನ್ನ ರೂಪವನ್ನೇ ಕಳೆದುಕೊಳ್ಳುತ್ತದೆ. ಆದರೆ ತಾವರೆಯ ಎಲೆಯಮೇಲೆ ಅದೇ ನೀರಿನ ಹನಿ ಬಿದ್ದರೆ  ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಮುತ್ತಿನಂತೆ ಕಂಗೊಳಿಸುತ್ತದೆ. ಕಪ್ಪೆ ಚಿಪ್ಪನೊಳಗೆ ಹೋದ ನೀರ ಹನಿಯು ಅತ್ಯಂತ ಬೆಲೆ ಬಾಳುವ  ಮುತ್ತೇ ಆಗುತ್ತದೆ. ಈ ಮೇಲಿನ ವಿಷಯಗಳನ್ನು ಗಮನಿಸಿದಾಗ ನಮಗೆ ತಿಳಿದುಬರುವುದೇನೆಂದರೆ  ಗುಣಗಳಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ಉತ್ತಮ, ಮಧ್ಯಮ ಹಾಗೂ ಅಧಮ ಎಂಬ ಗುಣಗಳು ನಾವು ಎಂಥಹ ಜನರೊಂದಿಗೆ ಸಹವಾಸವನ್ನು ಮಾಡಿದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಅಂದರೆ ನಾವು ಉತ್ತಮರ ಸಹವಾಸವನ್ನು ಮಾಡಿದರೆ ಉತ್ತಮ ಹಾಗೂ ನೀಚ ಜನರ ಸಹವಾಸ ಮಾಡಿದರೆ ಅಧಮ ಗುಣಗಳೇ ನಮ್ಮನ್ನು ಆವರಿಸಿಕೊಳ್ಳುತ್ತದೆ.
ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ  ಭಾಜ್ಯಂ ನ ಚ ಭಾರಕಾರೀ
ವ್ಯಯೇಕೃತೇ ವರ್ಧತ ಏವ  ನಿತ್ಯಂ
ವಿದ್ಯಾಧನಂ ಸರ್ವಧನಪ್ರಧಾನಂ
ಅಂದರೆ ಯಾವುದೇ ಕಳ್ಳನಿಂದಲೂ ಕದಿಯಲಾಗದ, ರಾಜನಿಂದಲೂ ಕಸಿದುಕೊಳ್ಳಲು ಸಾಧ್ಯವಾಗದ, ಅಣ್ಣ-ತಮ್ಮಂದಿರ ನಡುವೆ ಭಾಗ ಮಾಡಿ ಹಂಚಿಕೊಳ್ಳಲು ಸಾಧ್ಯವಾಗದ  ವ್ಯಯಿಸಿದಷ್ಟೂ ಹೆಚ್ಚಾಗುತ್ತಲೇ ಹೋಗುವ  ವಿದ್ಯೆಯೆಂಬ ಧನವೇ ಎಲ್ಲಾ ಧನಗಳಲ್ಲಿ ಪರಮಶ್ರೇಷ್ಟವಾದುದು.
ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ
ಕ್ರೋಧಶ್ಚ್ಯ ಧ್ರುಧವದಶ್ಚ್ಯ ಪರ ವಾಕ್ಯೇ ಚ ಅನಾದರ 
ತಾನೇ ತಿಳಿದವನೆಂಬ ಗರ್ವವನ್ನು ಹೊಂದಿದವನು, ಇತರರ ಮಾತಿಗೆ ಗೌರವವನ್ನೇ ನೀಡದವನು, ಆಧಾರರಹಿತವಾಗಿ ಗಟ್ಟಿಯಾಗಿ ವಾದಿಸುವವನು, ಭಯಂಕರ ಕೋಪದಲ್ಲಿ ಮುಳುಗಿರುವವನು, ಯಾವಾಗಲೂ ಅವಾಚ್ಯ ಕೀಳು ಶಬ್ಧಗಳಿಂದ ನಿಂದಿಸುತ್ತಾ ತಿರುಗುವವನು, ಈ ಐದು ಗುಣ ಹೊಂದಿರುವವನೇ ಮೂರ್ಖ
ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ 
 
ಇವರು ಮಾತ್ರವೇ ನಮ್ಮವರು, ಇವರು ಪರಕೀಯರೆಂಬುಣವು ಕೀಳು ಜನರ ಮುಖ್ಯ ಲಕ್ಷಣ, ಎಲ್ಲರೂ ಒಂದೇ ಎಂಬ ಉದಾತ್ತ ಮನೋಭಾವನೆಯನ್ನು ಹೊಂದಿದವರಿಗೆ ಈ ಜಗತ್ತೇ ಒಂದು ಸುಂದರವಾದ ಕುಟುಂಬದಂತೆ.
ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ  ಮನೋರಥೈಃ
ನ  ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ 
ಇಂತಹ ಕಾರ್ಯವನ್ನು ಮಾಡಬೇಕೆಂದು ಮನಸಿನಲ್ಲಿ ಅಂದುಕೊಂಡಾಕ್ಷಣ, ಮಾಡಬೇಕೆಂದುಕೊಂಡ ಕೆಲಸವು ಕಾರ್ಯಗತವಾಗಲು ಸಾಧ್ಯವೇ?,  ಸಿಂಹ ಕಾಡಿನ ರಾಜನಾದಾಕ್ಷಣ ಮಲಗಿರುವ ಸಿಂಹದ ಬಾಯಿಗೆ ಜಿಂಕೆ ಬಂದು ಆಹಾರವಾಗಿ ಬೀಳುವುದೇ?  ಯಾವುದೇ ಕಾರ್ಯ, ಉದ್ದೇಶ ಫಲಿಸಬೇಕಾದರೆ ನಿಶ್ಚಲ ಮನಸ್ಸು, ಧೃಢವಾದ ಪ್ರಯತ್ನ ಅತ್ಯಗತ್ಯ.
ಹಿರಿತನ 
ಮೊದಲು ಹಾಲು, ನಂತರದಲ್ಲಿ ಮೊಸರು, ಕೊನೆಯದಾಗಿ ತುಪ್ಪ ಹುಟ್ಟಿದರೂ, ತುಪ್ಪವು ಈ ಮೂರರಲ್ಲಿಯೂ ಪರಮಶ್ರೇಷ್ಟವೆನಿಸಿಕೊಳ್ಳುತ್ತದೆಯೋ ಹಾಗೆಯೇ ಹಿರಿತನ ಎಂಬುದು ಕೇವಲ ವಯಸ್ಸಿನಿಂದ ಬರುವುದಿಲ್ಲ ಅವನಲ್ಲಿರುವ ಉತ್ತಮವಾದ ಗುಣ-ನಡತೆಗಳಿಂದ ಮಾತ್ರವೇ ಲಭಿಸುತ್ತದೆ.
ಜಡಸಂಗೇಪಿ ನ ಲಿಪ್ತಾ: ಶ್ರೀ ಸದ್ಭಾವೇಪಿ ನೋತ್ತರಲಾ:
ಅಂಭೋಜಕೋರಕಾ ಇವ ವಿಜ್ಞಾವಿಕಸತಿ ವಿಶ್ವಸ್ಮೈ 
ಉತ್ತಮ ಗುಣ-ನಡತೆಯುಳ್ಳವರು ಮತ್ತು ಉತ್ತಮ ತಿಳುವಳಿಕೆಯುಳ್ಳವರು ಮೂರ್ಖರ ಅಥವಾ ದುಷ್ಟರ ಸಹವಾಸದಲ್ಲಿಯೇ ಇದ್ದರೂ ಸಹ ತಮ್ಮ ಸದ್ಗುಣಗಳನ್ನು ಕಳೆದುಕೊಳ್ಳುವುದಿಲ್ಲ, ಇಂತಹವರ ಬಳಿ ಎಷ್ಟೇ ಹಣ ಸಂಗ್ರಹವಾದರೂ ಸಹ ಇವರಿಗೆ ಹಣದ ಅಮಲೇರುವುದಿಲ್ಲ. ಕೆಸರಿನಲ್ಲಿಯೇ ಇದ್ದರೂ ಕಮಲದ ಹೂವು ಒಂದು ಹನಿ ಕೆಸರನ್ನೂ ಅಂಟಿಸಿಕೊಳ್ಳದೇ ಹೇಗೆ ಬದುಕುವುದೋ ಹಾಗೆಯೇ ತಿಳುವಳಿಕೆಯುಳ್ಳವರೂ ಸಹ ದುಷ್ಟರ ನಡುವೆಯೇ ಪರಿಶುದ್ಧರಾಗಿ ಜೀವಿಸುತ್ತಾರೆ.
ಅಕಾರಣಂ ರೂಪಮಕಾರಣಂ ಕುಲಂ
ಮಹತ್ಸು ನೀಚೇಷು ಚ ಕರ್ಮ ಶೋಭತೇ
ನಮ್ಮ ಕುಲವಾಗಲೀ, ನಮ್ಮಲ್ಲಿನ ರೂಪವಾಗಲೀ ಜನರಿಂದ ನಮಗೆ ಸಿಗುತ್ತಿರುವ ಅಥವಾ ಸಿಗಬಹುದಾದ ಘನತೆ-ಗೌರವ ಮರ್ಯಾದೆಗಳಿಗೆ ಕಾರಣವಲ್ಲ. ನಮಗೆ ಜನರು ಗೌರವ ಮರ್ಯಾದೆಗಳನ್ನು ನೀಡುತ್ತಿದ್ದಾರೆಂದರೆ ಅದು ಕೇವ ನಾವು ಈ ಹಿಂದೆ ಮಾಡಿರುವ ಮತ್ತು ಪ್ರಸ್ತುತ ಮಾಡುತ್ತಿರುವ ಉತ್ತಮ ಕಾರ್ಯಗಳಿಂದ ಮಾತ್ರವೇ ಆಗಿದೆ.
ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾಲವತ್ ಭವೇತ್
ಜನ್ಮಪ್ರಭೃತಿ: ಗೌರ್ನಾಸ್ತಿ ಪಯ: ಪಿಬತಿ ನಿತ್ಯಶ:
ಹಸುವನ್ನು ಮಾನವರಾದ ನಾವು ಸಾಕುತ್ತೇವೆ ಆದರೆ ಬೆಕ್ಕು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುತ್ತದೆ. ಅಂದರೆ ಬೆಕ್ಕು ತನ್ನ ಸತತ ಪ್ರಯತ್ನದ ಫಲವಾಗಿ ಹಲವು ಬಾರಿ ವಿಫಲವಾದರೂ, ಹಲವು ಬಾರಿ ಹೊಡೆತಗಳನ್ನು ತಿಂದರೂ ಒಮ್ಮೆಯಾದರೂ ಹಾಲು ಕುಡಿಯುವಲ್ಲಿ ಯಶಸ್ವಿಯಾಗುತ್ತದೆ.
ಅದೇ ರೀತಿ ಮನುಷ್ಯನಾದವನು ಒಮೆ ಸೋಲು ಕಂಡಾಕ್ಷಣ ಎದೆಗುಂದದೇ ತನ್ನ ಸತತ ಪ್ರಯತ್ನಗಳ ಮೂಲಕ ಮುನ್ನುಗ್ಗಿದಲ್ಲಿ ಒಂದು ದಿನ ಯಶಸ್ಸು ಸಾಧಿಸುವುದು ನಿಶ್ಚಿತ. ಇದಕ್ಕೆ ಎದೆಗುಂದದೇ ಪ್ರಯತ್ನಿಸುವ ಮನಸ್ಸು, ತನ್ನಿಂದಾಗದೆಂಬ ಹೇಡಿತನದಿಂದ ಹೊರಬರುವಿಕೆ ಎರೆಡೂ ಅತ್ಯವಶ್ಯಕ. ಆದುದರಿಂದಲೇ ಹಿರಿಯರು ಮರಳಿಯತ್ನವ ಮಾಡು ಎಂದು ಹೇಳಿದ್ದಾರೆ.
ಏಕಮಪ್ಯಕ್ಷರಂ ಯಸ್ತು ಗುರು: ಶಿಷ್ಯೇ ನಿವೇದಯೇತ್
ಪೃಥಿವ್ಯಾಂ ನಾಸ್ತಿ ತದ್ರವ್ಯಂ ಯದ್ವತ್ತಾ ಹ್ಯನೃಣೀಭವೇತ್
 
ವಿದ್ಯೆ ಎಂಬುದು ಪರಮ ಪವಿತ್ರವಾದ ಯಾರಿಂದಲೂ ಅಪಹರಿಸಲಾಗದ ಅಮೂಲ್ಯ ಸಂಪತ್ತು. ಇಂತಹ ಸಂಪತ್ತನ್ನು ಧಾರೆಯೆರೆಯುವವನನ್ನು ಗುರು ಎಂದು ಭಕ್ತಿಪೂರ್ವಕವಾಗಿ ಸಂಭೋಧಿಸಲಾಗುತ್ತದೆ. ಕೇವಲ ಒಂದೇ ಅಕ್ಷರವನ್ನು ಕಲಿಸಿದರೂ ಅವನು ಗುರುವಿನ ಸ್ಥಾನವನ್ನು ಪಡೆಯುತ್ತಾನೆ. ವಿದ್ಯೆ ಎಂಬುದು ಅಕ್ಷರಾಭ್ಯಾಸ ಮಾತ್ರವೇ ಅಲ್ಲ, ಉತ್ತಮ ಉಪದೇಶ, ಅನುಭವ, ಉತ್ತಮ ನುಡಿ, ಉತ್ತಮ ಹಾದಿಯಲ್ಲಿ ನಡೆಯಲು ಸೂಕ್ತ ಮಾರ್ಗದರ್ಶನವೂ ಸಹ ವಿದ್ಯೆಯೇ. ಆದುದರಿಂದ ಇಂತಹ ಸಂಪತ್ತನ್ನು ಧಾರೆಯೆರೆದು ನಮ್ಮ ಬಾಳನ್ನು ಹಸನುಗೊಳಿಸುವ ಗುರುವಿನ ಋಣವನ್ನು ಯಾವುದೇ ರೀತಿಯಿಂದಲೂ ತೀರಿಸಲು ಸಾಧ್ಯವಿಲ್ಲ.
ಅನುಭವಿಸಿದಷ್ಟೂ ಆಸೆ-ಅಮಲು ಹೆಚ್ಚಿಸುವುದು
ಸಂಪತ್ತು, ಜಗಳ, ಜೂಜು, ಮದ್ಯ, ಸ್ತ್ರೀ-ಸಂಗ, ಆಹಾರ, ನಿದ್ರೆ ಇವುಗಳನ್ನು ಅನುಭವಿಸಿದಷ್ಟೂ ಅವುಗಳ ಕುರಿತಾದ ನಮ್ಮ ಆಸೆ-ಆಸಕ್ತಿ ಇನ್ನೂ ಹೆಚ್ಚ್ಚುತ್ತಲೇ ಹೋಗುತ್ತದೆ. ಅದೇ ರೀತಿ ವಿದ್ಯೆಯೂ ಸಹ. ಆದರೆ ವಿದ್ಯೆಯ ಕುರಿತಾದ ನಮ್ಮ ಆಸಕ್ತಿ ಅಧಿಕವಾದಂತೆಲ್ಲಾ ಅದರ ಮೇಲಿನ ಹಿಡಿತ ಹೆಚ್ಚುವುದಲ್ಲದೇ ಅನೇಕ ಹೊಸಹೊಸ ವಿಷಯಗಳು ಅರಿವಿಗೆ ಬರುತ್ತದೆ ಮತ್ತು ಮಾನಸಿಕವಾಗಿ ನಮಗೆ ನಾವೇ ಪಕ್ವವಾಗುತ್ತೇವೆ. ಆದರೆ ವಿದ್ಯೆಯನ್ನು ಹೊರತುಪಡಿಸಿದ ಮೇಲೆ ತಿಳಿಸಿದ ವಿಷಯಗಳ ಮೇಲೆ ಅತಿಯಾದ ಆಸಕ್ತಿ ಬೆಳೆಸಿಕೊಂಡಲ್ಲಿ ಅದರಿಂದ ನಮ್ಮ ಜೀವನವನ್ನು ನಾವೇ ಅವನತಿಯತ್ತ ದೂಡುತ್ತೇವೆ. ಆದುದರಿಂದ ಉತ್ತಮವಾದುದರೆಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು
ಒಳ್ಳೆಯದನ್ನು ಬಯಸುವ ಗುಣ    
ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ. ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.
ಭಗವದ್ಗೀತೆಯ ಸುಭಾಷಿತ
ಆದುದೆಲ್ಲಾ ಒಳ್ಳೆಯದಕ್ಕೇ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ.
ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀನು ಮಾಡಿರುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ  ಪಡೆದಿರುವೆ.
ಏನನ್ನು ಅರ್ಪಿಸಿದ್ದರೂ ಅದನ್ನು ಇಲ್ಲಿಗೇ ಅರ್ಪಿಸಿರುವೆ.
ನಿನ್ನೆ ಬೇರೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ.
ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ.
ಪರಿವರ್ತನೆ ಜಗದ ನಿಯಮ

3 comments:

Na Talekar said...

ಭಗವದ್ಗೀತೆಯ ಸುಭಾಷಿತ ಸಂಸ್ಕೃತ ದಲ್ಲಿ ಪ್ರಕಟಿಸ ಬಹುದಾ ? ಧನ್ಯವಾದಗಳು .

Na Talekar said...
This comment has been removed by the author.
bhaktisagara said...

ಶ್ರೀಯುತ ನಾಗೇಶ್ ಅವರೆ ನಿಮ್ಮ ಪ್ರಶ್ನೆಗೆ ಧನ್ಯವಾದಗಳು

ಸುಭಾಷಿತಗಳಲ್ಲಿ ಪ್ರಕಟಿಸಲಾಗಿರುವ ಭಗವದ್ಗೀತೆಯ ಸುಭಾಷಿತವು ಭಗವದ್ಗೀತೆಯ ಯಾವುದೋ ಒಂದು ಸಂಸ್ಕೃತದ ಶ್ಲೋಕದ ಭಾವಾರ್ಥವಾಗಿರುವುದರ ಬದಲಾಗಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಹೊರಟಿಹ ಸಂಪೂರ್ಣ ಮಾರ್ಗದರ್ಶನದ ಸಾರಾಂಶ ಮಾತ್ರವೇ ಆಗಿದೆ ಎಂದು ಹೇಳಬಯಸುತ್ತೇನೆ.