ರಾಮಾಯಣ

ರಾಮಾಯಣ


        ರಾಮಾಯಣವು ಬೃಹತ್ ಕಾವ್ಯವಾಗಿದ್ದು, ಒಟ್ಟು 7 ಖಂಡಗಳು ಹಾಗೂ 24,000 ಶ್ಲೋಕಗಳನ್ನು ಒಳಗೊಂಡಿರುವ ಹಿಂದೂ ಪವಿತ್ರ ಗ್ರಂಥವಾಗಿದೆ. ಕ್ರಿ ಪೂರ್ವ 5 ರಿಂದ 1 ನೇ ಶತಮಾನದ ನಡುವಿನ ಅವಧಿಯಲ್ಲಿ ರಾಮಾಯಣ ಗ್ರಂಥದ ರಚನೆಯಾಯಿತೆಂದು ಹೇಳಲಾಗಿದೆ.


ರಾಮಾಯಣದಲ್ಲಿನ ಪ್ರಮುಖ ಖಂಡಗಳು

ಬಾಲಕಾಂಡ - ಬಾಲಕಾಂಡದಲ್ಲಿ ಶ್ರೀರಾಮಚಂದ್ರನ ಜನನದಿಂದ ಹಿಡಿದು ವಿಶ್ವಾಮಿತ್ರನ ಯಾಗ ಸಂರಕ್ಷಣೆಗೆ ತೆರಳುವವರೆಗೂ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ. 
ಅಯೋಧ್ಯಾ ಕಾಂಡ - ಅಯೋಧ್ಯಾ ಕಾಂಡದಲ್ಲಿ ಕೈಕೇಯಿ ಕೇಳಿದ ವರಗಳ ಪರಿಣಾಮ ಶ್ರೀರಾಮನಿಗೆ ಅರಣ್ಯಕ್ಕೆ ತೆರಳಬೇಕಾದ ಅನಿವಾರ್ಯತೆ ಪ್ರಾಪ್ತವಾಗುವ ಹಾಗೂ ಇದೇ ಕಾರಣದಿಂದ ದಶರಥ ಮಹಾರಾಜನು ಮರಣ ಹೊಂದುವ ಘಟನಾವಳಿಗಳನ್ನು ಕಾಣಬಹುದು.
ಅರಣ್ಯಕಾಂಡ - ಕೈಕೇಯಿ ಕೇಳಿದ ವರಗಳ ಪರಿಣಾಮದಿಂದ ವನವಾಸಕ್ಕೆ ತೆರಳುವ ಶ್ರೀರಾಮನು ಅರಣ್ಯದಲ್ಲಿ ಅನುಭವಿಸುವ ನೋವು, ನಲಿವುಗಳು, ಸೀತಾಪಹರಣ ಮೊದಲಾದ ಘಟನಾವಳಿಗಳನ್ನು ಒಳಗೊಂಡಿದೆ.
ಕಿಷ್ಕಿಂಧಾ ಕಾಂಡ - ಅಪಹರಣಗೊಂಡ ಸೀತೆಯನ್ನು ಹುಡುಕುತ್ತಾ ಹೊರಟ ಶ್ರೀರಾಮನು ವಾನರ ಸಾಮ್ರಾಜ್ಯವಾದ ಕಿಷ್ಕಿಂಧೆ ಎಂಬಲ್ಲಿಗೆ ಬರುತ್ತಾನೆ. ನಂತರ ಈ ಸಾಮ್ರಜ್ಯದಲ್ಲಿ ನೆಡೆಯುವ ಘಟನಾವಳಿಗಳು, ಸೀತೆಯನ್ನು ಹುಡುಕಲು ನೆರವಾಗುವ ವಾನರ ಸೈನ್ಯದ ಕುರಿತ ಚಿತ್ರಣವನ್ನು ಇಲ್ಲಿ ಕಾಣಬಹುದು.
ಸುಂದರಕಾಂಡ - ಆಂಜನೇಯನನ್ನು ಸುಂದರ ಎಂದೂ ಸಹ ಕರೆಯಲಾಗುತ್ತದೆಯಲ್ಲದೇ, ಈ ಭಾಗದಲ್ಲಿ ಹನುಮಂತನ ಕುರಿತಾದ ವರ್ಣನೆಯನ್ನೂ, ಹನುಮಂತನ ಸಾಗರೋಲ್ಲಂಘನ, ಲಂಕಾ ದಹನ ಮೊದಲಾದ ವಿವರಗಳನ್ನು ಕಾಣಬಹುದು. ಸುಂದರಕಾಂಡವನ್ನು ಯಾರು ಮನೆಯಲ್ಲಿ ಪಾರಾಯಣ ಮಾಡುತ್ತಾರೆಯೋ ಅವರ ಸಕಲ ಸಂಕಷ್ಟಗಳನ್ನೂ ಆಂಜನೇಯನು ನಿವಾರಿಸುತ್ತಾನೆಂಬ ನಂಬಿಕೆಯಿದೆ.
ಯುದ್ಧಕಾಂಡ - ಈ ಕಾಂಡದಲ್ಲಿ ಸೀತೆಯನ್ನು ಅರಸಿ ಬಂದ ರಾಅಮನಿಗೆ ಸೀತೆಯು ರಾವಣನಿಂದ ಬಂಧಿಸಲ್ಪಟ್ಟಿರುವ ವಿಷಯ ತಿಳಿದು, ಲಂಕೆಯ ಮೇಲೆ ವಾನರ ಸೈನ್ಯದೊಂದಿಗೆ ಧಾಳಿ ನೆಡೆಸಿ ರಾವಣನೊಂದಿಗೆ ಯುದ್ಧ ನೆಡೆಸಿ ಜಯಶಾಲಿಯಾಗುವ ಸನ್ನಿವೇಶಗಳನ್ನು ಕಾಣಬಹುದು.
ಉತ್ತರಕಾಂಡ - ವನವಾಸ ಮುಗಿಸಿ, ಸೀತೆಯನ್ನು ರಾವಣನಿಂದ ಬಿಡಿಸಿ ಅಯೋಧ್ಯೆಗೆ ಹಿಂತಿರುಗಿದ ನಂತರದಲ್ಲಿ ಕಳೆದ ದಿನಗಳು, ಅಗಸನ ಮಾತು ಶ್ರೀರಾಮನ ಮನಸಿನ ಮೇಲುಂಟು ಮಾಡಿದ ಪರಿಣಾಮ ಇವುಗಳ ಕುರಿತ ಚಿತ್ರಣವನ್ನು ಇಲ್ಲಿ ಕಾಣಬಹುದಾಗಿದೆ.




No comments: