ವಚನಗಳು


ಮುಂಡೆ ಬೋಳಾದೊಡಂ ದಂಡ ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ ಗುರುಮುಖವಕಂಡಲ್ಲದಿಲ್ಲ ಸರ್ವಜ್ಞ
                                                                                                                   ಸರ್ವಜ್ಞ

ಕೇವಲ ದೇವರಿಗೆ ಹರಕೆ ಹೊತ್ತು ತೀರಿಸುವುದರಿಂದಲಾಗಲಿ, ಸಂಸಾರ ಬಂಧನವನ್ನೇ ತ್ಯಜಿಸಿ ತಪಸ್ಸು ಮಾಡಲು ಹೋಗುವುದರಿಂದಾಗಲೀ ಸಾಕ್ಷಾತ್ಕಾರವಾಗುವುದಿಲ್ಲ. ಗುರುವಿನ ಕರುಣೆ ಮತ್ತು ಮಾರ್ಗದರ್ಶನ ಎಂಬ ಶಕ್ತಿ ಮಾತ್ರವೇ ನಮಗೆ ಸಾಕ್ಷಾತ್ಕಾರವನ್ನು ನೀಡಬಲ್ಲುದು.
                                                                                                                                            


ಜ್ಯೋತಿಯಿಂದಲಿ ನೇತ್ರ, ರಾತ್ರಿಯೊಳು ಕಾಂಬಂತೆ
ಸೂತ್ರದಿಂದಾತಗರಿವಂತೆ ಶಿವನ ಗುರುನಾಥನಿಂದರಿಗೂ ಸರ್ವಜ್ಞ
                                                                                              ಸರ್ವಜ್ಞ

ಕಾಳರಾತ್ರಿಯಲ್ಲಿ ಕೇವಲ ಒಂದು ಪುಟ್ಟ ದೀಪದಿಂದ ಹೇಗೆ ದಾರಿಯು ಗೋಚರಿಸುತ್ತದೆಯೇ ಹಾಗೆಯೇ ಮಹಾದೇವ ಶಿವನನ್ನು ಅರಿಯಬೇಕಾದರೆ ಅದು ಕೇವಲ ಗುರುವಿನ ಕರುಣೆಯಿಂದ ಮಾತ್ರವೇ ಸಾಧ್ಯವಿಷಯಕ್ಕೆ ಕುದಿಯದಿರು, ಅಶನಕ್ಕೆ ಹೆದರದಿರು
ಅಸಮಾಕ್ಷನಡಿಯನಗಲದಿರು, ಗುರುಕರುಣವಶವರ್ತಿಯಹುದು ಸರ್ವಜ್ಞ
                                                                                              ಸರ್ವಜ್ಞ

ಕೇವಲ ಲೌಕಿಕ ಹಾಗೂ ಕ್ಷಣಿಕ ಸುಖಗಳಿಗಾಗಿ ಹಾತೊರೆಯಬೇಡ, ಬದುಕಲಿಕ್ಕೆ ಆಹಾರವನ್ನು ಸೇವಿಸು ಬದಲಾಗಿ ಆಹಾರಕ್ಕಾಗಿ ಬದುಕಬೇಡ, ಎಂಥಹ ಸಂದರ್ಭವೇ ಬಂದರೂ ಅಸಮಾನ ನೇತ್ರಗಳನ್ನು  ಹೊಂದಿರುವ ಶಿವನನ್ನು ಅವನ ಧ್ಯಾನವನ್ನು ಅಗಲಬೇಡ. ಗುರುಕರುಣೆಯನ್ನು ಗಳಿಸು ಏಕೆಂದರೆ ಗುರುಕರುಣೆಯೇ ಶಿವನ ಸಾಕ್ಷಾತ್ಕಾರಕ್ಕೆ ಮೂಲಸದಾಚಾರ, ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ
ಅವರಾರಾಧನೆ ದಂಡ ನಿಚ್ಚನಿಚ್ಚಪ್ರಾಯಶ್ಚಿತ್ತರನೊಲ್ಲ
ಕೂಡಲಸಂಗಮದೇವ ಭೂಮಿ ಭಾರಕರ
                                                                                              ಬಸವಣ್ಣ

ಯಾವ ವ್ಯಕ್ತಿಯು ಸದಾಚಾರಿಯಾಗಿರುವುದಿಲ್ಲವೋ ಅಂತಹವನು ಶಿವನ ಸಾನ್ನಿಧ್ಯವನ್ನು ಹೊಂದಲಾರ. ಪ್ರತಿದಿನವು ದುರಾಚಾರಗಳನ್ನೆಸಗುತ್ತಾ, ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವ ಸಲುವಾಗಿ ದೈವಕಾರ್ಯಗಳನ್ನು ಕೈಗೊಳ್ಳುವ ವ್ಯಕ್ತಿಯನ್ನು ಶಿವನು ಕ್ಷಮಿಸಲಾರ ಮತ್ತು ಅಂತಹವರು ಭೂಮಿಗೆ ಭಾರವಾಗುತ್ತಾರೆ.ಮಾರಿ ಮಸಣ ಬೇರಿಲ್ಲ ಕಾಣಿರೋ
ಕಂಗಳು ತಪ್ಪಿ ನೋಡಿದರೆ ಮಾರಿ, ನಾಲಿಗೆ ತಪ್ಪಿ ನುಡಿದರೆ ಮಾರಿ
ನಮ್ಮ ಕೂಡಲಸಂಗಮದೇವನ ನೆನಹ ಮರೆದರೆ ಮಾರಿ
                                                                                              ಬಸವಣ್ಣ

ಮಾರಿ ಸ್ಮಶಾಣ ಎಂಬುದು ಎಲ್ಲಿಯೋ ಇಲ್ಲ,  ಪರಸ್ತ್ರೀಯರನ್ನು ಕಾಮುಕತೆಯಿಂದ ನೋಡಿದರೆ ಅದುವೇ ಮಾರಿ, ಪರಧನಕ್ಕೆ ಆಸೆ ಪಟ್ಟರೆ ಅದುವೇ ಮಾರಿ, ಆಡಿದ ಮಾತನ್ನು ಉಳಿಸಿಕೊಳ್ಲದಿದ್ದರೆ ಅದುವೇ ಮಾರಿ, ನಮ್ಮ ಶಿವನನ್ನು ಅಂದರೆ ಕೂಡಲಸಂಗಮದೇವನನ್ನು ಮರೆತು ಮುಂದುವರೆದರೆ ಅಂತಹ ಎಲ್ಲ ಸಂದರ್ಭಗಳಲ್ಲಿ ಮಾರಿಯು ಪ್ರತ್ಯಕ್ಷಳಾಗುತ್ತಾಳೆ. ಅಂದರೆ ಇಲ್ಲಿ ಮಾರಿ ಎಂಬುದೇ ಮನುಷ್ಯನ ಅವನತಿ ಎಂಬುದನ್ನು ಸೂಚಿಸುತ್ತದೆ.


ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ
                                                                                              ಬಸವಣ್ಣ

ಕಳತನ ಮಾಡಬಾರದು, ಸುಳ್ಳನ್ನು ಹೇಳಬಾರದು, ಯಾವಾಗಲೂ ಕೋಪಿಸಿಕೊಂಡಿರಬಾರದು, ಇತರರನ್ನು ಕಂಡು ಅಸಹ್ಯಪಡಬಾರದು, ತನ್ನನ್ನು ತಾನೇ ಹೊಗಳಿಕೊಂಡು ಇತರರನ್ನು ದೂಷಿಸಬಾರದು, ಇದನ್ನೇ ಅಂತರಂಗ ಮತ್ತು ಬಹಿರಂಗ ಶುದ್ಧಿ ಎನ್ನಲಾಗುತ್ತದೆ. ಹೀಗಿದ್ದಾಗ ಮಾತ್ರವೇ ಶಿವನು ಒಲಿಯುತ್ತಾನೆ ಎಂದು ಬಸವಣ್ಣನವರು ಹೇಳುತ್ತಾರೆ. 


ಇಬ್ಬರು ಮೂವರು ದೇವರೆಂದು ಉಬ್ಬಿ ಮಾತಾಡಬೇಡ
ಒಬ್ಬನೇ ಕಾಣಿರೋ ಇಬ್ಬರೆಂಬುದು ಹುಸಿನೋಡಾ
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ
                                                                                              ಬಸವಣ್ಣ

ದೇವರು ಇಬ್ಬರು ಮೂವರಿಹರೆಂದು ಅಹಂಕಾರದಿಂದ ಮಾತನಾಡಿ ಮೂರ್ಖನಾಗಬೇಡ, ಜಗತ್ತಿನಲ್ಲಿ ಇರುವುದೊಬ್ಬನೇ ದೇವನು, ಅವನೇ ನಮ್ಮ ಕೂಡಲಸಂಗಮದೇವನೆಂದು ಹೇಳಿದೆ ವೇದಗಳು


ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲ್ಲಲೀಯದೆನ್ನ ಮನವು
ಕೂಡಲಸಂಗಮ ನಿಮ್ಮ ಚರಣ ಕಮಲದಲಿ
ಭ್ರಮರನಾಗಿರಿಸು ನಿಮ್ಮ ಧರ್ಮ
                                                                                              ಬಸವಣ್ಣ

ಕೊಂಬೆಯ ಮೇಲಿರುವ ಕೋತಿಯಂತೆ ನನ್ನ ಮನಸ್ಸು ನೆಗೆದಾಡುತ್ತಿದೆ, ನಿಂತಲ್ಲಿ ನಿಲ್ಲಲು ಬಿಡದೆ ಚಂಚಲವಾಗುತಿದೆಯೆನ್ನ ಮನವು, ಮಹಾದೇವನಾದ ಕೂಡಲಸಂಗಮದೇವನೇ ಈ ನನ್ನ ಅನವನ್ನು ನಿನ್ನ ಪವಿತ್ರ ಚರಣಕಮಲಗಳ ಮೇಲೆ ದುಂಬಿಯಂತೆ ಕೂರುವಂತೆ ಮಾಡು


ಅಂದಣವೇರಿದ ಸೊಣಗನಂತೆ ಕಂಡ ಬಿಡದು
ತನ್ನ ಮುನ್ನಿನ ಸ್ವಭಾವವನು
ಸುಡು ಸುಡೀ ಮನವಿದು ವಿಷಯಕ್ಕೆ ಹರಿವುದು
ಮೃಡ ನಿಮ್ಮ ನೆನೆಯಲೀಯದು
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಸೆರಗೊಡ್ಡಿ ಬೇಡುವೆ ನಿಮ್ಮ
                                                                                              ಬಸವಣ್ಣ

ನಾಯಿಯನ್ನು ಸಿಂಹಸನದ ಮೇಲೆ ಕೂರಿಸಿದರೂ ಮಾಂಸದ ಅಥವಾ ಮೂಳೆಯ ತುಂಡು ಕಂಡಾಕ್ಷಣ ಓಡಿ ಬರುವುದು, ಅದೇ ರೀತಿ ನನ್ನ ಮನವು ಹೆಣ್ಣೂ, ಹೊನ್ನು, ಮಣ್ಣು ಎಂಬ ಸಂಸಾರಬಂಧನಗಳಿಗೆ ಆಸೆಗೊಳಗಾಗಿ ನಿಮ್ಮನ್ನು ನೆನಯದಾಗಿದೆ. ದಯವಿಟ್ಟು ಈ ಎಲ್ಲಾ ಬಂಧನಗಳಿಂದ ನನ್ನನ್ನು ಬಿಡಿಸಿ ನಿಮ್ಮನ್ನು ನೆನೆಯುವಂತೆ ಮಾಡು ಕೂಡಲಸಂಗಮದೇವಾ


ಅನು ಒಬ್ಬನು ಸುಡುವರೈವರು
ಮೇಲೆ ಕಿಚ್ಚು ಘನ, ನಿಲಲು ಬಾರದು
ಕಾಡಬಸವನ ಹುಲಿ ಕೊಂಡೊಯ್ಯುವರೆ
ಆರಯ್ಯಲಾಗದೆ ಕೂಡಲಸಂಗಮದೇವಾ
                                                                                              ಬಸವಣ್ಣ

ಪಂಚೇಂದ್ರಿಯಗಳಿಂದ, ಪಂಚೇಂದ್ರಿಯಗಳಿದುಂಟಾಗುವ ಮೋಹ-ಲಾಲಸೆಗಳಿಂದ ನನ್ನ ದೇಹ ಮನಸ್ಸು ಸುಡುತ್ತಿದೆ, ಕಾಡಿನಲ್ಲಿ ಹೋಗುತ್ತಿರುವ ಹಸುವಿನ ಮೇಲೆ ಹುಲಿಯೊಂದು ದಾಳಿ ಮಾಡಿದರೆ ಕೂಡಲಸಂಗಮ ದೇವನಲ್ಲದೇ ಇನ್ಯಾರು ಕಾಯಲು ಸಾಧ್ಯ, ಅದೇ ರೀತಿ ಪಂಚೇಂದ್ರಿಯಗಳ ಕಾಟದಿಂದ ನನಗೆ ಮುಕ್ತಿ ನೀಡಲು ಕೂಡಲಸಂಗಮದೇವನಿಗೆ ಮಾತ್ರವೇ ಸಾಧ್ಯಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಯಾಕೆ ಹುಟ್ಟಿಸಿದೆ ಇಹಲೋಕ ದು:ಖಿಯ
ಯಾಕೆ ಹುಟ್ಟಿಸಿದೆ ಪರಲೋಕದೂರನ
ಯಾಕೆ ಹುಟ್ಟಿಸಿದೆ ಕೂಡಲಸಂಗಮದೇವ ಕೇಳಯ್ಯ
ಎನಗಾಗಿ ಮತ್ತೊಂದು ತರು ಮರಂಗಳಿದ್ದಿಲ್ಲವೇ?
                                                                                              ಬಸವಣ್ಣ
ಶಿವಾ ನಿನಗೆ ಸ್ವಲ್ಪವೂ ಕರುಣೆಯಿಲ್ಲವೇ, ಕೃಪೆಯಿಲ್ಲವೇ, ಗಿಡಮರಗಳಾದರೂ ನೆರಳನ್ನಿತ್ತು ಬೇರೆಯವರಿಗಾಗಿಯೇ ಬದುಕುತ್ತವೆ, ತಮ್ಮ ಜೀವವನ್ನು ಸವೆಸುತ್ತವೆ, ಅದಕ್ಕಿಂತಲೂ ಕೀಳಾಗಿ ಇಹ-ಪರಗಳಿಂದ ದೂರವಿರುವಂತಹ ಜನ್ಮವನ್ನು ನನಗ್ಯಾಕೆ ದಯಪಾಲಿಸಿದೆ, ಇಹಲೋಕದಲ್ಲಿನ ದು:ಖಗಳಿಂದಾಗಿ ಬಸವಳಿದಿರುವೆ ನಾನು, ನನ್ನ ಮೇಲೆ ಕರುಣೆ ತೋರು ಕೂಡಲಸಂಗಮದೇವಾ


ಚಂದ್ರೋದಯಕ್ಕೆ ಅಂಬುಧಿ ಹೆಚ್ಚ್ಚುವುದಯ್ಯ
ಚಂದ್ರ ಕುಂದೇ ಕುಂದುವುದಯ್ಯ
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಬೊಬ್ಬಿಟ್ಟಿತೇ ಅಂಬುಧಿ
ಅಂಬುಧಿಯ ಮುನಿ ಆಪೋಷನ ಕೊಂಡಲ್ಲಿ ಚಂದ್ರಮನಡ್ಡ ಬಂದನೇ?
ಆರಿಗಾರು ಇಲ್ಲ ಕೆಟ್ಟವರಿಗೆ ಕೆಳೆಯಿಲ್ಲ
ಜಗದ ನಂಟ ನೀನೇ ಅಯ್ಯ ಕೂಡಲಸಂಗಮದೇವಾ
                                                                                              ಬಸವಣ್ಣ
ಚಂದ್ರ ಬೆಳೆದಂತೆಲ್ಲಾ ಸಮುದ್ರದ ಭೋರ್ಗರೆತ ಹೆಚ್ಚುತ್ತದೆ, ಅದೇ ರೀತಿ ಕೃಷ್ಣಪಕ್ಷದ ಸಂದರ್ಭದಲ್ಲಿ ಚಂದ್ರ ಇಳಿಮುಖವಾದಂತೆಲ್ಲಾ ಸಮುದ್ರದ ಮೊರೆತವೂ ಸಹ ಕುಂದಿಹೋಗುತ್ತದೆ. ಒಂದೊಮ್ಮೆ ಚಂದ್ರಗ್ರಹಣದ ಸಮಯದಲ್ಲಿ ರಾಹು ಅಡ್ಡ ಬಂದಾಗ ಸಮುದ್ರದ ಮೊರೆತವೂ ಸಹ ಹೆಚ್ಚುತ್ತದೆ. ಆದರೆ ಅಗಸ್ತ್ಯ ಮಹರ್ಷಿಗಳು ಇಡೀ ಸಮುದ್ರವನ್ನು ತಮ್ಮ ಕೈಯಲ್ಲಿ ಹಿಡಿದು ನುಂಗಿದಾಗ ಅವರಿಂದ ಬಿಡಿಸಿಕೊಳ್ಳಲು ಚಂದ್ರನು ಬರಲೇ ಇಲ್ಲ. ಅದೇ ರೀತಿ ಈ ಸಂಸಾರ ಬಂಧನದಲ್ಲಿ ಯಾರಿಗೆ ಯಾರೂ ಇಲ್ಲ ಎಂದು ಈ ವಚನದ ಮೂಲಕ ಬಸವಣ್ಣನವರು ಹೇಳಿದ್ದಾರೆ.


ನರಕೂರಂಬಿನಲೆಚ್ಚಲವಂಗೊಲಿದೆಯಯ್ಯಾ
ಅರಳಂಬಿನಲೆಚ್ಚಕಾಮನನುರುಹಿದೆ ಅಯ್ಯ
ಇರುಳು ಹಗಲೆನ್ನದೇ ಪ್ರಾಣಹತ ಮಾಡಿದ
ಬೇಡನ ಕೈಲಾಸಕ್ಕೊಯ್ದೆಯಯ್ಯಾ
ಎನ್ನನೇತಕ್ಕೊಲ್ಲೆ? ಕೂಡಲಸಂಗಮದೇವಾ
                                                                                              ಬಸವಣ್ಣ
ಈ ವಚನದ ಮೂಲಕ ಬಸವಣ್ಣನವರು ಈಶ್ವರನ ಲೀಲೆಗಳ ವೈವಿದ್ಯತೆಯನ್ನು ಕುರಿತು ಹೇಳಿದ್ದಾರೆ. ಶಿವನೇ ನಿನಗೆ ಬಾಣದಿಂದ ಹೊಡೆದರೆ ಅರ್ಜುನನಿಗೆ ಪಾಶುಪತಾಸ್ತ್ರ ದಯಪಾಲಿಸಿದೆ, ಆದರೆ ಅದೇ ಬಾಣದಿಂದ ಹೊಡೆದ ಕಾಮನನ್ನು ನಿನ್ನ ಮೂರನೆಯ ಕಣ್ಣು ತೆರೆದು ಸುಟ್ಟು ಹಾಕಿದೆ, ಆದರೆ ಹಗಲಿರುಳೆನ್ನದೆ ಕೇವಲ ಮೂಕ ಜಂತುಗಳ ಬೇಟೆಯಾಡಿದ ಕಣ್ಣಪ್ಪನನ್ನು ನಿನ್ನಲ್ಲಿಗೆ ಕೊಂಡೊಯ್ದೆ, ಇದೇನು ನಿನ್ನ ಲೀಲೆ ನನ್ನನು ಮಾತ್ರ ಏತಕ್ಕೆ ಕೊಂಡೊಯ್ಯೊತ್ತಿಲ್ಲ ಎಂದು ಬಸವಣ್ಣನವರು ಶಿವನಲ್ಲಿ ಅಂಗಲಾಚಿ ಬೇಡಿಕೊಂಡಿದ್ದಾರೆ. 


ಮನವೇ ಸರ್ಪ ತನುವೇ ಹೇಳಿಗೆ ಹಾವಿನೊಡತಣದ ಹುದುವಾಳಿಗೆ
ಇನ್ಯಾವಾಗ ಕೊಂದಿಹುದೆಂದರಿಯೆ ಇನ್ಯಾವಾಗ ತಿಂದಿಹುದೆಂದರಿಯೆ
ನಿನ್ನ ನಿಚ್ಚತೆ ನಿಮ್ಮ ಪೂಜಿಸಬಲ್ಲೊಡೆ ಅದೇ ಗಾರುಡ ಕೂಡಲಸಂಗಮದೇವಾ
                                                                                              ಬಸವಣ್ಣ


ಶಿವನೇ ಮನುಷ್ಯನ ಮನವೆಂಬುದು ಪಂಚೇಂದ್ರಿಯಗಳಿಂದಾದ ಸರ್ಪದ ಹೆಡೆಯಂತಿದೆ, ವಿಷಯ-ಆಸೆಗಳೇ ಆ ಮನವೆಂಬ ಸರ್ಪದಲ್ಲಿನ ವಿಷವಾಗಿದೆ, ದೇಹದೊಳಗೇ ವಿಷಪೂರಿತ ಮನಸೆಂಬ ಸರ್ಪದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಪರಶಿವನ ಪೂಜೆಯೇ ಸರಿಯಾದ ಅಸ್ತ್ರ ಎಂಬುದಾಗಿ ಬಸವಣ್ಣನವರು ಈ ವಚನದ ಮೂಲಕ ಹೇಳಿದ್ದಾರೆ.

ನೀರು ಬೊಬ್ಬುಳಿಕೆಗೆ ಕಬ್ಬುನದ ಕಟ್ಟು ಕೊಟ್ಟು
ಸುರಕ್ಷಿತ ಮಾಡುವ ಭರವ ನೋಡಾ
ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ
ಬದುಕೋ ಕಾಯವ ನಿಶ್ಚಯಿಸದೇ
                                                                                             ಬಸವಣ್ಣ
ಮನುಷ್ಯನ ಜೀವನ ಎಂಬುದು ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು ಯಾವ ಕ್ಷಣದಲ್ಲಿಯಾದರೂ ನೀರ ಮೇಲಿನ ಗುಳ್ಳೆ ಹೊಡೆದು ಹೋಗುವಂತೆ ಮನುಷ್ಯನ ಜೀವನವು ಮುಕ್ತಾಯಗೊಳ್ಳಬಹುದು, ನೀರಿನ ಮೇಲಿನ ಗುಳ್ಳೆ ಹೊಡೆದುಹೋಗಬಾರದೆಂದು ಕಬ್ಬಿಣದ ಕಟ್ಟು  ನೀಡಿದರೂ ಅದು ವ್ಯರ್ಥ ಪ್ರಯತ್ನವಾಗುತ್ತದೆ, ಆದುದರಿಂದ ಕ್ಷಣಿಕವಾದ ಮನುಷ್ಯನ ಈ ಜೀವನದಲ್ಲಿ ಮಹಾದೇವನಾದ ಕೂಡಲಸಂಗಮದೇವನನ್ನು ಪೂಜಿಸಿ, ಆರಾಧಿಸಿ ಮೋಕ್ಷ ಹೊಂದು ಎಂಬುದಾಗಿ ಬಸವಣ್ಣನವರು ಈ ವಚನದ ಮೂಲಕ ತಿಳಿಸಿದ್ದಾರೆ.


ಪಂಜರ ಬಲ್ಲಿತ್ತೆಂದು ಅಂಜದೇ ಓಡುವ ಗಿಳಿಯೇ
ನೀನೆಂದಿಗೂ ಅಳಿಯೆನೆಂದು ಗುಡಿಕಟ್ಟಿದೆಯಲ್ಲಾ
ನಿನ್ನ ಮನದೊಳಗು ಮಾಯಾ ಪಂಜರವು ಕೊಲುವಡೆ
ನಿನ್ನ ಪಂಜರ ಕಾವುದೇ ಪೇಳಾ ಕೂಡಲಸಂಗಮದೇವನಲ್ಲದೆ?
                                                                                              ಬಸವಣ್ಣ
ಭದ್ರವಾದ ಪಂಜರದಲ್ಲಿನ ಗಿಳಿಯು ನಾನು ಭದ್ರವಾದ ಪಂಜರದಲ್ಲಿದ್ದೇನೆ ನನಗ್ಯಾವ ಭಯವೂ ಇಲ್ಲ ಎಂದು ತಿಳಿದಿರುತ್ತದೆ, ಆದರೆ ಅದಕ್ಕೂ ತಿಳಿಯದಂತೆ ಬೆಕ್ಕಿನ ರೂಪದಲ್ಲಿ ಅದಕ್ಕೆ ಮರಣ ಕಾದಿರುತ್ತದೆ. ಅದೇ ರೀತಿ ಮನುಷ್ಯನು ಪಂಚಭೂತಗಳಿಂದ ನನ್ನ ದೇಹವು ಸುಭದ್ರವಾಗಿದೆ, ಸುರಕ್ಷಿತ ಎಂದು ಭಾವಿಸಿರುತ್ತಾನೆ, ಆದರೆ ಮಾಯಾವಿ ಬೆಕ್ಕಿನಂತೆ ಮರಣ ಎಂಬುದು ಮನುಷ್ಯನ ಕಣ್ಣಿನ ಮುಂದೆ ಪ್ರತ್ಯಕ್ಷವಾದಾಗ ಅವನನ್ನು ಅದರಿಂದ ರಕ್ಷಿಸಲು ಆ ಮಹಾನುಭಾವನಾದ ಪರಶಿವನೊಬ್ಬನಿಂದ ಮಾತ್ರವೇ ಸಾದ್ಯ ಎಂದು ಬಸವಣ್ಣನವರು ಹೇಳಿದ್ದಾರೆ.

ವ್ಯಾಧನೊಂದು ಮೊಲವ ತಂದೆಡೆ ಸಲುವ ಹಾಗಕ್ಕೆ ಬೆಲೆಗೈವರಯ್ಯಾ
ನೆಲವನಾಳ್ವನ ಹೆಣನೆಂದೆಡೆ ಒಂದಡಿಕೆಗೆ ಕೊಂಬುದಿಲ್ಲ ನೋಡಯ್ಯಾ
ಮೊಲನಿಗಿಂತ ಕರಕಷ್ಟ ನರರ ಬಾಳುವೆ
ಸಲೆ ನಂಬೋ ನಮ್ಮ ಕೂಡಲಸಂಗಮದೇವನ
                                                                                              ಬಸವಣ್ಣ
ಬೇಟೆಗಾರನು ಕಾಡಿನಿಂದ ಮೊಲವೊಂದನ್ನು ಕೊಂದು ತಂದರೆ ಜನರು ಅದಕ್ಕೆ ಬೆಲೆ ನೀಡಿ ಕೊಂಡೊಯ್ಯುವರು ಆದರೆ ಇಡೀ ರಾಜ್ಯವನ್ನೇ ಆಳುವ ರಾಜನು ಸತ್ತರೆ ಅವನ ದೇಹವನ್ನು ಕೇವಲ ಒಂದು ಅಡಿಕೆ ಚೂರಿಗೂ ಸಹ ಯಾರೂ ಕೊಳ್ಳಲು ಮುಂದೆ ಬರುವುದಿಲ್ಲ. ಅಂದರೆ ಮನುಷ್ಯ ಮನುಷ್ಯನ ಜೀವನ ಕೇವಲ ಒಂದು ಮೊಲಕ್ಕಿಂತಲೂ ಕಡೆಯಾಗಿದೆ, ಆದುದರಿಂದ ಎಲ್ಲಾ ಚಿಂತೆ-ಆಸೆ-ಲಾಲಸೆಗಳನ್ನು ಬದಿಗಿರಿಸಿ ಕೂಡಲಸಂಗಮ ದೇವನನ್ನು ನಂಬು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಕುಂಬಳದ ಕಾಯಿಗೆ ಕಬ್ಬುನದ ಕಟ್ಟು ಕೊಟ್ಟರೆ
ಕೊಳೆವುದಲ್ಲದೆ ಬಲುವಾಗಬಲ್ಲುದೇ?
ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿಯೆಂತಹುದು ಮುನ್ನಿನಂತಲ್ಲದೇ?
ಕೂಡಲಸಂಗಯ್ಯ ಮನಹೀನನ ಮೀಸಲಿಣಾ ಹೀಗಿರಿಸಿದಂತೆ
                                                                                              ಬಸವಣ್ಣ
ಕುಂಬಳಕಾಯಿಯನ್ನು ಹೊರಗಿಟ್ಟರೆ ಕೊಳೆಯಬಹುದೆಂದು ತಿಳಿದು, ಅದು ಕೊಳೆಯಬಾರದೆಂಬ ಕಾರಣದಿಂದ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಾಕ್ಷಣ ಅದು ಕೊಳೆಯದಿರುವುದೇ, ಅದೇ ರೀತಿ ದುರ್ಬಲ, ಚಂಚಲ ಮನಸ್ಥಿತಿಯುಳ್ಳವನಿಗೆ ಶಿವದೀಕ್ಷೆಯನ್ನು ನೀಡಿದರೂ ಅವನ ಚಾಂಚಲ್ಯದಿಂದ ಅವನು ಮೊದಲಿನಂತೆಯೇ ಆಗುತ್ತಾನೆ ಹಾಗೂ ನೈವೇದ್ಯಕ್ಕೆಂದು ಇಟ್ಟಿದ್ದನ್ನು, ನೈವೇದ್ಯವಾಗುವ ಮೊದಲೇ ರುಚಿ ನೋಡಿಯೇ ತೀರುತ್ತಾನೆ ಎಂಬುದಾಗಿ ಹೇಳುತ್ತಾ ಸೂಕ್ತವಲ್ಲದ ವ್ಯಕ್ತಿಗಳಿಗೆ ಶಿವದೀಕ್ಷೆಯಿಂದ ಉಪಯೋಗವಿಲ್ಲ ಎಂದು ತಿಳಿಸಿದ್ದಾರೆ.

ಸಗಣಿಯ ಬೆನಕಂಗೆ ಸಂಪಗೆಯ ಅರಳಲ್ಲಿ ಪೂಜಿಸಿದೆಡೆ
ರಂಜನೆಯಹುಲ್ಲದೆ ಅದರ ಗಂಜಳ ಬಿಡದಣ್ಣಾ
ಮಣ್ಣ ಪುಥುಳಿಯ ಮಾಣದೇ ಜಲದಲ್ಲಿ ತೊಳೆದೆಡೆ
ನಿಚ್ಚ ಕೆಸರಹುಲ್ಲದೆ ಅದರಚ್ಚುಗ ಬಿಡದಣ್ಣಾ
ಲೋಕದ ಮಾನವರಿಗೆ ಶಿವದೀಕ್ಷೆಯ ಕೊಟ್ಟೆಡೆ
ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ
                                                                                              ಬಸವಣ್ಣ
ಗಣಪತಿಯ ಮೂರ್ತಿಯನ್ನು ಸಗಣಿಯಿಂದ ಮಾಡಿದಾಕ್ಷಣ ಮೂರ್ತಿಯನ್ನು ಸಗಣಿಯ ವಾಸನೆ ಬಿಡುತ್ತದೆಯೇ, ಕೆಸರಿನಿಂದ ಮಾಡಿದ ಮೂರ್ತಿಯು ಶುದ್ದವಾಗಲೆಂದು ಎಷ್ಟೇ ತೊಳೆದರೂ ಅದರಿಂದ ಬರುವುದು ಕೇವಲ ಕೆಸರೇ ಆಗಿರುತ್ತದೆ. ಅದೇ ರೀತಿ ಜಗತ್ತಿನ ವಿಷಯಾಸಕ್ತನಾದವನಿಗೂ ಶಿವದೀಕ್ಷೆಯನ್ನು ನೀಡಿದಾಕ್ಷಣ ಅವನು ಬದಲಾಗುವುದಿಲ್ಲ, ಸದ್ಭಕ್ತನಾಗುವುದಿಲ್ಲ ಎಂದು ಬಸವಣ್ಣನವರು ಈ ವಚನದ ಮೂಲಕ ತಿಳಿಸಿದ್ದಾರೆ.

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು
ಕಂಗಳಿಚ್ಚೆಗೆ ಪರವಧುವ ನೆರೆವರು
ಲಿಂಗಲಾಂಛನ ದಾರಿಯಾದಲ್ಲಿ ಫಲವೇನು ಲಿಂಗಪಥವ
ತಪ್ಪಿ ನೆಡೆವವರು ಜಂಗಮ ಮುಖದಿಂದ ನಿಂದೆ ಬಂದೆಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವಾ
                                                                                              ಬಸವಣ್ಣ
ಕೇವಲ ದೇಹಸುಖಕ್ಕಾಗಿ ಮದ್ಯ ಕುಡಿಯುವವರು, ಮಾಂಸ ತಿನ್ನುವವರು, ಕಣ್ಣುಗಳಿಂದ ಪರಸ್ತ್ರೀಯರನ್ನು ನೋಡಿ ಖುಷಿ ಪಡುವವರು ಇಂತಹವರಿಗೆ ಶಿವದೀಕ್ಷೆ ನೀಡಿದರೂ ಸಹ ಅವರಲ್ಲಿ ಇಂದ್ರಿಯಗಳನ್ನು ನಿಗ್ರಹಿಸುವ ಸಾಮರ್ಥ್ಯವಿಲ್ಲದಿದ್ದರೆ ಅಂತಹವರಿಗೆ ನರಕ ಪ್ರಾಪ್ತಿಯಾಗುವುದು ಖಚಿತ ಎಂದು ಈ ಮೂಲಕ ಬಸವಣ್ಣನವರು ತಿಳಿಸಿದ್ದಾರೆ.

ಬಂಡಿಯ ತುಂಬಾ ಪತ್ರೆಯ ತಂದು ಕಂಡಕಂಡಲ್ಲಿ
ಮಜ್ಜನಕ್ಕೆರೆದರೆ ತಾಪತ್ರಯವ ಕಳೆದು ಲಿಂಗವ ಪೂಜಿಸಿ
ತಾಪತ್ರಯವ ಲಿಂಗನೊಲ್ಲ ಕೂಡಲಸಂಗಮದೇವಾ
ಬರಿ ಯುಧಕದಲ್ಲಿ ನೆನೆವನೆ
                                                                                              ಬಸವಣ್ಣ
ಶಿವನ ಪೂಜೆಗಾಗಿ ಪತ್ರೆ ಬೇಕು ಹಾಗೂ ನೀರು ಬೇಕು, ಹಾಗೆಂದು ಬಂಡಿಗಟ್ಟಲೆ ಪತ್ರೆಗಳನ್ನು ತಂದು, ಸಿಕ್ಕ ಸಿಕ್ಕಲ್ಲಿ ನೀರಿನಿಂದ ಅಭಿಷೇಕವನ್ನು ಮಾಡಿದಾಕ್ಷಣ ಸತ್ವ ಗುಣ, ರಜೋ ಗುಣ ಹಾಗೂ ತಮೋ ಗುಣಗಳನ್ನು ಹೊಂದಿದವನಿಗೆ ಶಿವನೊಲುಮೆಯಾಗುವುದಿಲ್ಲ, ಶಿವನು ಕೇವಲ ಯ್ಭಕ್ತಿಯ ಕಣ್ನೀರಿಗೆ, ಹಾಗೂ ಭಕ್ತಿಯಿಂದ ಸಲ್ಲಿಸುವ ಕೇವಲ ಒಂದೇ ಒಂದು ಪತ್ರೆಗೆ ಒಲಿಯುವವನು ಎಂದು ಬಸವಣ್ಣನವರು ಈ ಮೂಲಕ ಹೇಳಿದ್ದಾರೆ.

ಹಸಿದು ಎಕ್ಕದ ಕಾಯ ಮೆಲ್ಲಬಹುದೇ ?
ನೀರಡಿಸಿ ವಿಷವ ನೀಂಟಬಹುದೇ ?
ಸುಣ್ಣದ ತುಯ್ಯಲ ಬಣ್ಣವೊಂದೇ ಎಂದರೆ
ನಂಟುತನಕ್ಕೆ ಉಣ್ಣಬಹುದೇ?
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮದೇವರೆಂತೊಲಿವನು
                                                                                              ಬಸವಣ್ಣ
ತುಂಬಾ ಹಸಿವೆಯಾಗಿದೆಯೆಂಬ ಕಾರಣಕ್ಕೆ ಎಕ್ಕದ ಕಾಯಿಗಳನ್ನು ತಿನ್ನಲಾಗುವುದೇ, ಬಹಳ ಬಾಯಾರಿಕೆಯಾಗಿದೆ ಎಂದು ವಿಷವನ್ನು ಕುಡಿಯಲಾಗುತ್ತದೆಯೇ, ಸುಣ್ಣದ ತಿಳಿನೀರು ಹಾಗೂ ಹಾಲು ಒಂದೇ ರೀತಿಯಿದೆ ಎಂದು ಎಷ್ಟೇ ಪ್ರೀತಿಯಿಂದ ಬಂಧು ಬಳಗದವರು ನೀಡಿದರೂ ಅದನ್ನು ಕುಡಿಯಲಾಗುವುದಿಲ್ಲವೋ ಅದೇ ರೀತಿಯಲ್ಲಿ ಸಜ್ಜನರಲ್ಲದವರು, ಕೇವಲ ದುರ್ಗುಣಗಳಿಂದ ಕೂಡಿದವರು ಯಾವುದೇ ರೀತಿಯಿಂದ ಶಿವಾರಾಧನೆ ಮಾಡಿದರೂ ಅದು ವ್ಯರ್ಥವಾಗುವುದು.

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ
                                                                                              ಬಸವಣ್ಣ
ಬಾಯಿಯಿಂದ ಹೊರಬರುವ ಒಂದೊಂದು ಮಾತೂ ಸಹ ಮುತ್ತಿನಿಂದ ಪೋಣಿಸಿದ ಹಾರದಂತೆ, ಮಾಣಿಕ್ಯದಿಂದ ಹೊರಹೊಮ್ಮುವ ಪ್ರಕಾಶಮಾನವಾದ ಬೆಳಕಿನಂತೆ, ಸ್ಪಟಿಕದಿಂದ ಮಾಡಿದ ಸಲಾಕೆಯಂತೆ ಇರಬೇಕು ಹಾಗೆಂದ ಮಾತ್ರಕ್ಕೆ ಶಿವನೊಲುಮೆಯಾಗುವುದಿಲ್ಲ, ಯಾರು ಆಡಿದ ಮಾತಿಗೆ ತಪ್ಪಿ ನಡೆಯುವರೋ ಅವರಿಗೆ ಶಿವನು ಖಂಡಿತ ಒಲಿಯುವುದಿಲ್ಲ. ಎಂದು ಈ ವಚನದ ಮೂಲಕ ಬಸವಣ್ಣನವರು ತಿಳಿಸಿದ್ದಾರೆ.

ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣವು ನಿನಗೇಕೆ ಲಿಂಗದಾ
ಹಾದಿಯರಿಯದಲೆ ಸರ್ವಜ್ಞ
                                                                                              ಸರ್ವಜ್ಞ
ಓದಿ-ವಾದಗಳನ್ನು  ಮಾಡುವುದೇಕೆ?, ಅನಗತ್ಯ ಗಾದೆಯ ಮಾತುಗಳೇಕೆ, ವೇದ-ಪುರಾಣಗಳ ಹಂಗೇಕೆ, ಮನ ಪರಿಶುದ್ಧನಾಗಿ ಶಿವಲಿಂಗವನ್ನು ಪೂಜಿಸುವ ಹಾದಿಯಿಡಿ, ನಿನಗೆ ಶಿವನೊಲುಮೆ ದೊರೆಯುವುದೆಂದು ಸರ್ವಜ್ಞ ಈ ವಚನದ ಮೂಲಕ ತಿಳಿಸಿದ್ದಾರೆ.

ಒಡಲೊಳಗಣ ಕಿಚ್ಚು ಒಡಲ ಸುಡದ ಬೇಧವನು
ಕುಡಿದುದಕದಲ್ಲಿ ಆ ಕಿಚ್ಚು ನಂದನ ಬೇಧವನ್ನು
ಮೃಡನೇ ಪ್ರಾಣ-ಪ್ರಕೃತಿಯೊಳಗೆ ನೀನಡಗಿಹ ಬೇಧವನು
ಲೋಕದ ಬಡಜೀವಿಗಳೆತ್ತ ಬಲ್ಲರೈ ರಾಮನಾಥ

                                                                               ದೇವರ ದಾಸಿಮಯ್ಯ
ನಮ್ಮ ದೇಹದಲ್ಲೇ ಮನೆ ಮಾಡಿರುವ ದ್ವೇಷ, ಅಸೂಯೆಗಳೆಂಬ ಬೆಂಕಿ ನಮ್ಮದೇ ದೇಹದಲ್ಲಿದ್ದರೂ ಸಹ ನಮ್ಮನ್ನು ಸುಡದೇ ಬಿನ್ನವಾಗಿದೆ, ಅದೇ ರೀತಿ ಬೆಂಕಿಯು ತಣ್ಣನೆಯ ನೀರಿನಲ್ಲಿ ತಾಮಸಾವಾಗುವುದರ ವಿಚಿತ್ರ, ಪ್ರಕೃತಿಯ ಎಲ್ಲಾ ಅಂಶಗಳಲ್ಲಿ ಪ್ರಾಣ ಅಡಗಿರುವುದನ್ನು ಮಹಾದೇವನಾದ ರಾಮನಾಥನಲ್ಲದೇ ಬಡಜೀವಿಗಳೆಲ್ಲಿ ತಿಳಿಯಲು ಸಾಧ್ಯ ಎಂದು ದೇವರ ದಾಸಿಮಯ್ಯನವರು ಈ ಮೂಲಕ ತಿಳಿಸಿದ್ದಾರೆ.

ಅಡಗಿನೊಳಗೆ ಹಾಲು ಅಡಗಿರುವ ಬೇಧವನ್ನು 
ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ
ಎಲೆಮೃಡನೆ ನೀನು ಪ್ರಾಣ-ಪ್ರಕೃತಿಗಳೊಳಗೆ
ಅಡಗಿತಪ್ಪ ಬೇಧವನು ಲೋಕದ
ಬಡಜೀವಗಳೆತ್ತ ಬಲ್ಲರು ರಾಮನಾಥ
                                                                               ದೇವರ ದಾಸಿಮಯ್ಯ
ಹಸುವೆಂಬ ಪ್ರಾಣಿಯ ಮಾಂಸದೊಳಗೆಯೇ ಹಾಲು ಅಡಗಿರುವುದನ್ನು, ತುಪ್ಪದೊಳಗೆ ಕಂಪು ಅಡಗಿರುವುದನ್ನು ಪ್ರಕೃತಿಯ ಎಲ್ಲಾ ಅಂಶಗಳಲ್ಲಿ ಪ್ರಾಣ ಅಡಗಿರುವುದನ್ನು ಮಹಾದೇವನಾದ ರಾಮನಾಥನಲ್ಲದೇ ಬಡಜೀವಿಗಳೆಲ್ಲಿ ತಿಳಿಯಲು ಸಾಧ್ಯ ಎಂದು ದೇವರ ದಾಸಿಮಯ್ಯನವರು ಈ ಮೂಲಕ ತಿಳಿಸಿದ್ದಾರೆ.


ನಡೆಯಲರಿಯದೆ, ನುಡಿಯಲರಿಯದೆ 
ಲಿಂಗವ ಪೂಜಿಸಿ ಫಲವೇನು?
ಅವರ ಸುಖವೆನ್ನಸುಖ ಅವರ ದು:ಖವೆನ್ನ ದು:ಖ
ಕೂಡಲಸಂಗನ ಶರಣರ ಮನನೊಂದೆಡೆ ಅನು ಬೆಂದೆನಯ್ಯ

                                                                               ಬಸವಣ್ಣ

ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು
ದಿಟನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬುವ ಜಂಗಮ ಬಂದರೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನ ಮಾಡಿದರೆ
ಕಲ್ಲುತಾಗಿದ ಮಿಟ್ಟೆಯಂತಪ್ಪರಯ್ಯ

                                                                               ಬಸವಣ್ಣ

ಅರ್ಥರೇಖೆಯಿದ್ದಲ್ಲಿ ಫಲವೇನು?
ಆಯುಷ್ಯರೇಖೆಯಿಲ್ಲದನ್ನಕ್ಕ ರ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು?
ಅಂಧಕನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದಲ್ಲಿ ಫಲವೇನು?
ನಮ್ಮ ಕೂಡಲಸಂಗನ ಶರಣನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು? ಶಿವಪಥವನರಿಯದನ್ನಕ್ಕ

                                                                               ಬಸವಣ್ಣ

ತನುವ ನೋಯಿಸಿ, ಮನವ ಬಳಲಿಸಿ
 ನಿಮ್ಮ ಪಾದವು ಪಿಡಿದವರೊಳರೊ
ಈ ನುಡಿ ಸುಡದಿಹುದೇ ಕೂಡಲಸಂಗಮದೇವಾ?
ಶಿವಭಕ್ತರ ನೋವೇ ಅದೇ ಲಿಂಗದ ನೋವು.

                                                                               ಬಸವಣ್ಣ

ನೂರನೋದಿ ನೂರ ಕೇಳಿದರೇನು?
ಆಸೆ ಹರಿಯದು ರೋಷ ಬಿಡದು
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ ಡೊಂಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ

                                                                               ಬಸವಣ್ಣ

ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯ
ಅವರಾರಾಧನೆದಂಡ ನಿಚ್ಚ ನಿಚ್ಚ
ಪ್ರಾಯಶ್ಚಿತ್ತರನೊಲ್ಲ
ಕೂಡಲಸಂಗಮದೇವ ಭೂಮಿ ಭಾರಕರ

                                                                               ಬಸವಣ್ಣ

ಸ್ವಾಮಿ ಭೃತ್ಯ ಸಂಬಂಧಕ್ಕೆ ಆವುದು ಪಥವೆಂದರೆ
ದಿಟವ ನುಡಿವುದು, ನುಡಿದಂತೆ ನೆಡೆವುದು
ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಯನೊಲ್ಲ 
ನಮ್ಮ ಕೂಡಲಸಂಗಮದೇವಾ

                                                                               ಬಸವಣ್ಣ

ದೇವಲೋಕ ಮರ್ತ್ಯಲೋಕ ಎಂಬುದು ಬೇರಿಲ್ಲ ಕಾಣಿರೋ
ಸತ್ಯವ ನುಡಿವುದೆ ದೇವಲೋಕ
ಮಿಥ್ಯವ ನುಡಿವುದೆ ಮರ್ತ್ಯಲೋಕ
ಆಚಾರವೆ ಸ್ವರ್ಗ, ಅನಾಚಾರವೆ ನರಕ
ಕೂಡಲಸಂಗಮದೇವ ನೀವೇ ಪ್ರಮಾಣ

                                                                               ಬಸವಣ್ಣ

ಹುತ್ತವ ಬಡಿದರೆ ಹಾವು ಸಾಯಬಲ್ಲುದೇ ಅಯ್ಯ
ಅಘೋರ ತಪವ ಮಾಡಿದರೇನು?
ಅಂತರಂಗದ ಆತ್ಮಶುದ್ಧವಿಲ್ಲವರನೆಂತು ನಂಬುವನಯ್ಯ
ನಮ್ಮ ಕೂಡಲಸಂಗಮದೇವ ನಿನ್ನೆಂತು ಮೆಚ್ಚುವನಯ್ಯ

                                                                               ಬಸವಣ್ಣ

ಕಾಣಲೊಲ್ಲದೆ ತನ್ನ ತ್ರಾಣವನು ನೆರೆನಂಬಿ
ಜಾಣತನವನು ತೋರಿದರೆ ಗುರುಮುಖವ
ಕಾಣದೆ ಹೋಹ ಸರ್ವಜ್ಞ
                                                                               ಸರ್ವಜ್ಞ

ವಿಷಯಕ್ಕೆ ಕುದಿಯದಿರು ಅಶನಕ್ಕೆ ಹೆದರದಿರು
ಅಸಮಾಕ್ಷ ನಡಿಯನಗಲದಿರು
ಗುರುಕರುಣ ವಶವರ್ತಿಯಹುದು ಸರ್ವಜ್ಞ
                                                                               ಸರ್ವಜ್ಞ

ತಾಪದ ಸಂಸಾರ ಕೂಪದಲಿ ಬೀಳ್ದವರು
ಆಪತ್ತನುಳಿದು ಪೊರಮಡಲು
ಗುರುಪಾದ ಸೋಪಾನ ಕಾಣಾ ಸರ್ವಜ್ಞ
                                                                               ಸರ್ವಜ್ಞ

ಹಂದಿ ಚಂದನ ಸಾರ ಗಂಧವ ಬಲ್ಲುದೇ
ಒಂದುವ ತಿಳಿದರಿಯದ ಗುರುವಿಗೆ
ನಿಂದ್ಯವೇ ಬಹುದು ಸರ್ವಜ್ಞ
                                                                               ಸರ್ವಜ್ಞ

ಎತ್ತಾಗಿ ತೊತ್ತಾಗಿ ಹಿತ್ತಲಿನ ಗಿಡವಾಗಿ
ಮತ್ತೆ ಪಾದದ ಕೆರವಾಗಿ
ಗುರುವಿನ ಹತ್ತಲಿರು ಸರ್ವಜ್ಞ
                                                                               ಸರ್ವಜ್ಞ

ಬೆಟ್ಟ ಕರ್ಪುರ ಉರಿದು ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವನರಿದವನ ಕರ್ಮವು
ಮುಟ್ಟಲಂಜುವವು ಸರ್ವಜ್ಞ
                                                                               ಸರ್ವಜ್ಞ

ಮೊಸರು ಕಡೆಯಲು ಬೆಣ್ಣೆ ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶದಿಂ
ಮುಕ್ತಿ ವಶವಾಗದಿಹುದೇ ಸರ್ವಜ್ಞ
                                                                               ಸರ್ವಜ್ಞ

ಪರಮನಾರೂಪದಲ್ಲಿ ನೆರವೀಯಲರಿಯದೆ
ನರನಾಗಿ ಬಂದು ವರವೀವ ಗುರುವಿಂಗೆ
ಸರಿಯಾದ ಕಾಣೆ ಸರ್ವಜ್ಞ                                                                               ಸರ್ವಜ್ಞ

                                                                                                                                              

No comments: